ADVERTISEMENT

ವಿ.ವಿ ಭೂ ಸ್ವಾಧೀನ; ಸಭೆ ವಿಫಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ರಾಮನಗರ: ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಭೂಸ್ವಾಧೀನ ತೊಡಕು ನಿವಾರಣೆ ಸಂಬಂಧ ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರೈತರು ಮತ್ತು ಅಧಿಕಾರಿಗಳ ಸಭೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ.

ಈಗಿನ ಮಾರುಕಟ್ಟೆ ಬೆಲೆಗೆ ಪೂರಕವಾಗಿ ದರ ಪರಿಷ್ಕರಣೆ ಮಾಡದ ಹೊರತು ಜಮೀನು ಬಿಟ್ಟುಕೊಡಲು ಸಿದ್ಧ ಇಲ್ಲ ಎಂದು ಅರ್ಚಕರಹಳ್ಳಿ ರೈತರು ಸಭೆಯಲ್ಲಿ ಪಟ್ಟು ಹಿಡಿದರು. ಆದರೆ ಕೆಐಎಡಿಬಿ ಅಧಿಕಾರಿಗಳು ಇದಕ್ಕೆ ಸ್ಪಂದಿಸದೆ, ಹಳೆ ದರದಂತೆಯೇ ಭೂ ಸ್ವಾಧೀನ ಮಾಡಿಕೊಳ್ಳುವ ನಿಲುವಿಗೆ ಅಂಟಿಕೊಂಡ ಕಾರಣ ಸಭೆ ಯಶಸ್ವಿಯಾಗಲಿಲ್ಲ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ ಗೆ ತಿಳಿಸಿವೆ.

ಈಗಾಗಲೇ ಭೂ ಸ್ವಾಧೀನ ವಿರೋಧಿಸಿ ಗ್ರಾಮದ ಕೆಲ ರೈತರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು, ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಪ್ರಕರಣದ ವಿಚಾರಣೆ ಇದೇ 14ರಂದು ಬರಲಿದ್ದು, ಅದಕ್ಕೆ ಮುಂಚಿತವಾಗಿಯೇ ರೈತರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಒಮ್ಮತ ಮೂಡಿಸುವ ಉದ್ದೇಶದಿಂದ ಸಚಿವ ರೇಣುಕಾಚಾರ್ಯ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿಯೇ ಸಭೆ ನಡೆಸಿದರು.

ರೈತರಿಗೆ ಅನಾನುಕೂಲವಾಗದಂತೆ ದರ ಪರಿಷ್ಕರಿಸಿ ಯೋಜನೆಯ ಅನುಷ್ಠಾನಕ್ಕೆ ಮುಂದಾಗುವಂತೆ ಸಚಿವರು ಸೂಚಿಸಿದರೂ, ಅಧಿಕಾರಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸದೆ, ವಿವಿಧ ರೀತಿಯ ಸಬೂಬು ನೀಡಿದರು ಎಂದು ತಿಳಿದು ಬಂದಿದೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡ ಸಂದರ್ಭದಲ್ಲಿ ಮತ್ತು ಬೆಂಗಳೂರಿನ ಕೆಂಪೇಗೌಡ ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ರೈತರು ಹೋರಾಟ ಮಾಡಿದ ಕಾರಣ ದರ ಪರಿಷ್ಕರಿಸಿ ಭೂಮಿ ಖರೀದಿಸಿದ ಉದಾಹರಣೆ ಇರುವಾಗ, ರಾಜೀವ್ ಗಾಂಧಿ ವಿ.ವಿ ನಿರ್ಮಾಣದ ಭೂ ಸ್ವಾಧೀನಕ್ಕೆ ಏಕೆ ರೈತರಿಗೆ ನ್ಯಾಯಯುತ ಬೆಲೆ ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂದು ರೈತರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಭೂ ಪರಿಹಾರದ ಬೆಲೆ ಪರಿಷ್ಕರಿಸುವ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಒಪ್ಪಿಕೊಂಡರೆ ಈ ಸಂಬಂಧ ಚಿಂತಿಸಬಹುದು ಎಂದು ಕೆಐಎಡಿಬಿ ಅಧಿಕಾರಿಗಳು ಈ ಸಂದರ್ಭದಲ್ಲಿ ಸಚಿವರಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಇದೇ 14ರಂದು ನಡೆಯುವ ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ರೈತರ ಜತೆ ಸಭೆ ನಡೆಸಲು ಸಚಿವ ರೇಣುಕಾಚಾರ್ಯ ತಿಳಿಸಿದರು.

ನ್ಯಾಯಯುತ ಬೆಲೆ ದೊರೆಯದಿದ್ದರೆ ಕಾನೂನು ಹೋರಾಟ ಮುಂದುವರೆಸುತ್ತೇವೆ. ಒಂದು ವೇಳೆ ನ್ಯಾಯಾಲಯದಲ್ಲಿ ರೈತರ ಪರವಾಗಿ ತೀರ್ಪು ಬಂದರೆ, ಸರ್ಕಾರ ಎಕರೆಗೆ ಎರಡು ಕೋಟಿ ರೂಪಾಯಿ ಪರಿಹಾರ ನೀಡಲು ಮುಂದಾದರೂ ಭೂಮಿ ನೀಡುವುದಿಲ್ಲ ಎಂದು ಅರ್ಚಕರಹಳ್ಳಿಯ ರೈತರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಕೆಐಎಡಿಬಿ ಅಧಿಕಾರಿಗಳಾದ ದ್ಯಾಬೇರಿ, ಹೀರಾನಾಯ್ಕ, ಅರ್ಚಕರಹಳ್ಳಿ ರೈತ ಸೋಮಶೇಖರ್ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.