ADVERTISEMENT

ವೃದ್ಧಾಪ್ಯ ವೇತನ; ವೃದ್ಧರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ವಿಜಾಪುರ: ವೃದ್ಧಾಪ್ಯ ವೇತನವನ್ನು ಮಾಸಿಕ 2,000 ರೂಪಾಯಿಗೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ ನೇತೃತ್ವದಲ್ಲಿ ವಯೋವೃದ್ಧರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು.

`ರಾಜ್ಯದಲ್ಲಿ 50 ಲಕ್ಷದಷ್ಟು ಹಿರಿಯ ನಾಗರಿಕರಿದ್ದಾರೆ. ಅವರನ್ನು ಹೊರೆ ಎಂದು ಕಾಣಲಾಗುತ್ತಿದೆ. ಇದು ತಪ್ಪಬೇಕು. ವೃದ್ಧಾಪ್ಯ ವೇತನವನ್ನು ಮಾಸಿಕ 2,000 ರೂಪಾಯಿಯಂತೆ ಎಲ್ಲ ಅರ್ಹ ಫಲಾನುಭವಿಗಳಿಗೆ ನೀಡಬೇಕು ಮತ್ತು ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು. ಅರ್ಹತಾ ವಯೋಮಿತಿಯನ್ನು 60 ವರ್ಷಕ್ಕೆ ಇಳಿಸಬೇಕು~ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷೆ ಮೆಹಬೂಬಿ ಇಂಡೀಕರ, ಫೆಡಿನಾ ಸಂಸ್ಥೆ ಕ್ಷೇತ್ರ ಸಂಯೋಜಕ ಪ್ರಭುಗೌಡ ಪಾಟೀಲ ಆಗ್ರಹಿಸಿದರು.

ಹಿರಿಯ ನಾಗರಿಕರ ಸಮಗ್ರ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕು. ವಯೋವೃದ್ಧರಿಗೆ ನೀಡುತ್ತಿರುವ ಮಾಶಾಸನ ಅವರ ಹಕ್ಕಾಗಬೇಕು ಎಂದು ಚಂದ್ರು ಸಾಳುಂಕೆ, ಶಾಂತಾಬಾಯಿ ಮಾನೆ, ರಾಮು ಚಲವಾದಿ ಮನವಿ ಮಾಡಿದರು.

ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ನಿಗದಿಪಡಿಸಿರುವ ಕನಿಷ್ಠ ವೇತನದ ಆಧಾರದ ಮೇಲೆ ತಮಗೆ ಮಾಶಾಸನ ನೀಡಬೇಕು. ವಯೋವೃದ್ಧರ ಹೆಸರಿನಲ್ಲಿ ಮಾಶಾಸನ ಪಡೆಯುತ್ತಿರುವ ಸುಳ್ಳು ಫಲಾನುಭವಿಗಳನ್ನು ಪತ್ತೆ ಹೆಚ್ಚಿ  ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಮಂಡಳಿ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಹಾಂಗೀರ ಮಿರ್ಜಿ, ಸಾವಿತ್ರಿ ದುಲಗುಂಡಿ ಆಗ್ರಹಿಸಿದರು.

ಫೆಡಿನಾ ಸಂಸ್ಥೆ, ಜಿಲ್ಲಾ ಕಟ್ಟಡ ಕಾರ್ಮಿಕರ ಯೂನಿಯನ್, ಜಿಲ್ಲಾ ಗೃಹ ಕಾರ್ಮಿಕರ ಯೂನಿಯನ್, ಅಸಂಘಟಿತ ಕಾರ್ಮಿಕರ ಯೂನಿಯನ್, ಜಿಲ್ಲಾ ಸ್ಲಂ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ, ವಿಜಾಪುರ ನಗರ ಕೊಳೆಗೇರಿ ಅಭಿವೃದ್ಧಿ ಸಮಿತಿ, ಪ್ರಗತಿಪರ ಸಂಘಟನೆ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT