ADVERTISEMENT

ವೈಭವದ ಕರಿಬಸವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 19:30 IST
Last Updated 5 ಮಾರ್ಚ್ 2011, 19:30 IST

ಮಲೆಬೆನ್ನೂರು:  ಸುಕ್ಷೇತ್ರದ ಉಕ್ಕಡಗಾತ್ರಿ ಕರಿಬಸವೇಶ್ವರಸ್ವಾಮಿ ರಥೋತ್ಸವ ಶನಿವಾರ ವೈಭವದಿಂದ ನೆರವೇರಿತು.
ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾಂಪ್ರದಾಯಿಕ ರಥಪೂಜೆ ನೆರವೇರಿಸಿದ ನಂತರ, ಗ್ರಾಮ ದೇವತೆಗಳ ಸಮ್ಮುಖದಲ್ಲಿ ರಥಶಾಂತಿ ಹಾಗೂ ಬಲಿದಾನ ನಡೆಯಿತು. ಜೋಡು ನಂದಾದೀಪ ಬೆಳಗಿಸಿದ ನಂತರ ಜನತೆ ‘ಹರಹರ ಮಹಾದೇವ’ ಉದ್ಘೋಷ ಕೂಗುತ್ತಾ ರಾಜಬೀದಿಯಲ್ಲಿ ತೇರು ಎಳೆದರು. ಜಾನಪದ ಕಲಾತಂಡ  ನಂದಿಕೋಲು, ಡೊಳ್ಳು ಕುಣಿತ, ಭಜನಾ ತಂಡ, ಹಲಗೆ ಹಾಗೂ ಮಂಗಳವಾದ್ಯ ತಂಡ ಕಳೆ ತಂದಿದ್ದವು. ವೀರಗಾಸೆ ಕುಣಿತ ತಂಡದ ಪ್ರದರ್ಶನ ಜನಮನ ಸೆಳೆಯಿತು.

ಜನತೆ ತಮ್ಮ ಜಮೀನಿನಲ್ಲಿ ಪ್ರಸಕ್ತ ಸಾಲಿನಲ್ಲಿ ಬೆಳೆದ ಧಾನ್ಯ, ಬಾಳೆಹಣ್ಣು, ಕಾರಮಂಡಕ್ಕಿ, ಉತ್ತತ್ತಿ, ದ್ರಾಕ್ಷಿ, ಗೋಡಂಬಿ, ಬಾದಾಮಿ ಮಿಶ್ರಣ ಮತ್ತು ತೆಂಗಿನಕಾಯಿ ಸಮರ್ಪಿಸಿದರು. ನಂತರ, ಅವುಗಳನ್ನು ಭಕ್ತರು ಆಯ್ದುಕೊಂಡರು. 

ಉತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ರಾಜ್ಯ ಸಾರಿಗೆ ಸಂಸ್ಥೆಯ ವಿವಿಧ ಘಟಕಗಳು ಬಸ್ ವ್ಯವಸ್ಥೆ ಮಾಡಿದ್ದವು. ಖಾಸಗಿ ವಾಹನದ ಭರಾಟೆ ಹೆಚ್ಚು ಇತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.