ಗುಲ್ಬರ್ಗ: ಸಾಹಿತಿ ಡಾ. ಚೆನ್ನಣ್ಣ ವಾಲಿಕಾರ ಅವರು ರಚಿಸಿದ ‘ವ್ಯೋಮಾ ವ್ಯೋಮ’ ಕಾವ್ಯಕೃತಿಯ ಪ್ರಥಮ ಹುಟ್ಟುಹಬ್ಬದ ಆಚರಣೆ ಸಮಾರಂಭ ಭಾನುವಾರ ಇಲ್ಲಿನ ವಾಲಿಕಾರ ಭವನದಲ್ಲಿ ನಡೆಯಿತು.
ರಾಯಚೂರಿನ ಯುವ ಸಾಹಿತಿ ಆರೀಫ್ ರಾಜಾ ಕಾರ್ಯಕ್ರಮ ಉದ್ಘಾಟಿಸಿ, ‘ಈ ಕೃತಿಯ ಬಗ್ಗೆ ಮಾತನಾಡುವವರು ಅದನ್ನು ಓದಿಕೊಂಡಿದ್ದಾರೆಯೇ ಎನ್ನುವ ಸಂಶಯ ಕೇಳಿಸಿಕೊಳ್ಳುವವರಲ್ಲಿ ಹುಟ್ಟಿಕೊಳ್ಳುತ್ತದೆ. ಈ ಕಾವ್ಯಕೃತಿಯ ಆಳ ಹಾಗೂ ಅದರ ಗಾತ್ರ ಇಂಥ ಸಂಶಯ ಹುಟ್ಟಿಕೊಳ್ಳಲು ಎಡೆಮಾಡಿಕೊಡುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಕೃತಿಗಿಂತ ಕೃತಿಕಾರ ದೊಡ್ಡವನಲ್ಲ ಎನ್ನುವ ಸಾಂಪ್ರದಾಯಿಕ ಮನೋಭಾವದ ಹಿನ್ನೆಲೆಯಲ್ಲಿ ಈ ಕಾವ್ಯಕೃತಿಗೆ ಮುನ್ನುಡಿ ಹಾಗೂ ಬೆನ್ನುಡಿಗಳನ್ನು ಬರೆದಿಲ್ಲ ಎನ್ನುವುದು ನನ್ನ ಭಾವನೆ. ಸಾವಿರ ಪುಟದ ಬೃಹತ್ ಕಾವ್ಯವನ್ನು ಎಲ್ಲಿಯೂ ಭಾಷಾ ಲಯ ತಪ್ಪದಂತೆ ಬರೆದಿರುವುದು ಮಹಾನ್ ಸಾಧನೆ ಎಂದು ವಿಶ್ಲೇಷಿಸಿದರು.
ಯಾರ ಅಂಕೆಗೂ ಸಿಗದ ಆಕಾಶ ತತ್ವದ ರೀತಿಯಲ್ಲಿ ‘ವ್ಯೋಮಾ ವ್ಯೋಮ’ ಹುಟ್ಟಿಕೊಂಡಿದೆ. ಕೃತಿಯಲ್ಲಿ ಧನಾತ್ಮಕ, ಋಣಾತ್ಮಕ ಅಂಶಗಳೆಲ್ಲವೂ ಉಲ್ಲೇಖವಾಗಿವೆ. ಆಧುನಿಕೋತ್ತರ ಕಾಲದಲ್ಲಿ ಅದ್ಭುತ ಪವಾಡ ನಡೆದ ಹಾಗೆ ಮೂಡಿಬಂದಿರುವ ಈ ಕಾವ್ಯಕೃತಿಯನ್ನು ಎಲ್ಲರೂ ಗುರುತಿಸಬೇಕಾಗಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಸಮಾರಂಭಕ್ಕೂ ಮುನ್ನ ಡಾ. ವಿ.ಸಿ.ಅಂದಾನಿ, ವಾಲಿಕಾರ ಭವನ ಉದ್ಘಾಟಿಸಿದರು. ಶಾರದಾ ಜಂಬಲದಿನ್ನಿ ವಚನ ಗಾಯನ ಮಾಡಿದರು. ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಪರಿಚಯಿಸಿ ಸ್ವಾಗತಿಸಿದರು. ಡಾ. ಮ.ಗು.ಬಿರಾದಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.