ADVERTISEMENT

ಶಾಲಾ ಮಕ್ಕಳಿಗೆ ಅರಣ್ಯ ಸಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಕುಷ್ಟಗಿ: ಪರಿಸರ ಸಂರಕ್ಷಣೆಯಲ್ಲಿ ಮರಗಿಡಗಳ ಮಹತ್ವ ಕುರಿತು ಶಾಲಾ ಮಕ್ಕಳಲ್ಲಿ ಅಭಿರುಚಿ ಬೆಳೆಸುವ ಉದ್ದೇಶದಿಂದ ಪ್ರಾದೇಶಿಕ ಅರಣ್ಯ ಇಲಾಖೆ ಜಾರಿಗೆ ತಂದಿರುವ `ಮಗುವಿಗೊಂದು ಮರ ಶಾಲೆಗೊಂದು ವನ~ ಯೋಜನೆಯಲ್ಲಿ ಬುಧವಾರ ಇಲ್ಲಿಯ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ಅರಣ್ಯ ಸಸಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ (ಪ್ರಭಾರ) ಕೆ.ಮಲ್ಲಪ್ಪ, ಅರಣ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮುದಾಯದ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಗಿಡ ಮರಗಳು, ಪರಿಸರದ ಬಗ್ಗೆ ಆಸಕ್ತಿ ಮತ್ತು ಸಸಿಗಳನ್ನು ನೆಡುವಲ್ಲಿ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಮಕ್ಕಳಿಗೆ ಸಸಿಗಳನ್ನು ನೀಡಲಾಗುತ್ತಿದೆ. ಮನೆ ಅಥವಾ ಜಮೀನು, ತೋಟಗಳಲ್ಲಿ ಖಾಲಿ ಜಾಗೆಯಲ್ಲಿ ಈ ಸಸಿಗಳನ್ನು ಮಕ್ಕಳು ನೆಡುವುದರಿಂದ ಅದರ ಮೇಲೆ ಪ್ರೀತಿ ಹೆಚ್ಚುತ್ತದೆ ಎಂಬ ಪರಿಕಲ್ಪನೆ ಈ ಯೋಜನೆಯದ್ದಾಗಿದೆ ಎಂದು ಹೇಳಿದರು.

ಬೇವು, ನೆಲ್ಲಿ, ಹುಣಸೆ, ಹೊಂಗೆ, ಕಾಡುಬದಾಮಿ ಇತರೆ ಸಸಿಗಳು ಅಲ್ಲದೇ ನುಗ್ಗೆ ಸಸಿಗಳನ್ನು ವಿದ್ಯಾರ್ಥಿಗಳಿಗೆ ತಲಾ ಒಂದರಂತೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಸಸಿ ವಿತರಿಸಲಾಗುತ್ತಿದ್ದು ಐವತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದರು.

ದೈಹಿಕ ಶಿಕ್ಷಣಾಧಿಕಾರಿ ವೆಂಕನಗೌಡ ದಾದ್ಮಿ, ಮುಖ್ಯ ಶಿಕ್ಷಕ ಪುತ್ರಪ್ಪ, ಉಪ ವಲಯ ಅರಣ್ಯಾಧಿಕಾರಿಗಳಾದ ಎ.ರೇಣುಕ, ಶಾಂತಕುಮಾರ, ಮಹಾಂತಯ್ಯ, ಸಿಬ್ಬಂದಿ ರಾಠೋಡ, ನೌಕರರ ಸಂಘದ ಪ್ರತಿನಿಧಿ ಅಹ್ಮದ್ ಹುಸೇನ್, ಅರಣ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಮಕ್ಕಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.