ADVERTISEMENT

ಶಿಕ್ಷಕ ವೃತ್ತಿಯ ಪಾವಿತ್ರ್ಯ ಕಾಪಾಡಿ: ಬಸವರಾಜನಾಯ್ಕ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 7:05 IST
Last Updated 7 ಫೆಬ್ರುವರಿ 2011, 7:05 IST

ದಾವಣಗೆರೆ:  ಶಾಲೆಗಳು ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಕಾರ್ಖಾನೆ ಆಗಬೇಕು ಎಂದು ರಾಜ್ಯ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ‘ಗುರುಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಕಾರಣಿಗಳ ಹಿಂದೆ ತಮ್ಮ ಶಿಷ್ಯರು ಅಧಿಕಾರವಿರುವ ತನಕ ಮಾತ್ರ ಇರುತ್ತಾರೆ. ಆದರೆ, ಶಿಕ್ಷಕರ ಹಿಂದಿರುವ ಶಿಷ್ಯವೃಂದ ಮಾತ್ರ ಗುರುವಿನ ಕೊನೆಯುಸಿರು ಇರುವ ತನಕವೂ ಇರುತ್ತದೆ. ಪ್ರಸ್ತುತ ರಾಷ್ಟ್ರ ದಿಕ್ಕು ತಪ್ಪುತ್ತಿದೆ. ಅದನ್ನು ಸರಿದಾರಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಪಾವಿತ್ರ್ಯ ಕಾಪಾಡಿಕೊಳ್ಳಬೇಕು.ಆಗಮಾತ್ರ ವಿದ್ಯಾರ್ಥಿಗಳಿಗೆ ಭದ್ರವಾದ ಅಡಿಗಲ್ಲು ಹಾಕಲು ಸಾಧ್ಯ ಎಂದು ಸಲಹೆ ನೀಡಿದರು.

ಶಿಕ್ಷಕರು ಜಾತಿ-ಭೇದ ಮರೆತು ವಿದ್ಯಾರ್ಥಿಗಳಿಗೆ ಬೆಳಕು ನೀಡಬೇಕು. ವಿದ್ಯಾರ್ಥಿಗಳ ಬಾಳು ಬಂಗಾರ ಆಗಿಸುವಲ್ಲಿ ಶಿಕ್ಷಕರ ಮಾತ್ರ ಹಿರಿದು. ಯಾವುದೇ, ಕಲ್ಮಶವಿಲ್ಲದೇ ವಿದ್ಯಾರ್ಥಿಗಳ ಬಾಳಿಗೆ ದಿಕ್ಸೂಚಿಯಾಗಿ. ಶಿಕ್ಷಕರು ಕೊಟ್ಟ ಸಲಹೆ-ಸೂಚನೆಗಳು ಎಂದೋ ಮಾರ್ಗದರ್ಶಿ ಆಗುತ್ತವೆ ಎಂದು ಹೇಳಿದರು.

ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಮಾತನಾಡಿ, ಪರಿಷತ್ ಯಾವುದೇ ಪರ್ಯಾಯ ಸಂಘಟನೆಯೂ ಅಲ್ಲ. ಯಾರ ವಿರುದ್ಧದ ಸಂಘಟನೆಯೂ ಅಲ್ಲ. ಶಿಕ್ಷಕರ ಸೇವೆಯೇ ಪರಿಷತ್‌ನ ಗುರಿ. ಶಿಕ್ಷಕರಿಗೂ ಸೇವಾ ಮನೋಭಾವವಿದೆ ಎಂದು ತೋರಿಸುವುದು ಕೂಡಾ ಉದ್ದೇಶ. ಪರಿಷತ್ ಶಿಕ್ಷಕರ ಸೇವೆ, ಶೈಕ್ಷಣಿಕ ಬಲವರ್ಧನೆ ಹಾಗೂ ಪ್ರತಿಭಾ ಪುರಸ್ಕಾರದಂಥ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದೆ ಎಂದು ತಿಳಿಸಿದರು.

ಪ್ರಾಮಾಣಿಕ ಸೇವೆ ಹಾಗೂ ಪ್ರಶಸ್ತಿಗಳಿಗೆ ಆಸೆ ಪಡದ ಶಿಕ್ಷಕರನ್ನು ಪರಿಷತ್ ಗುರುತಿಸುತ್ತಿದೆ. ಯಾವುದೇ, ಅರ್ಜಿ ಹಾಕಿಸಿಕೊಳ್ಳದೇ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಜಿ.ಪಂ. ಸದಸ್ಯರಾದ ಸುಧಾ ಪಾಟೀಲ್, ಯಶೋದಮ್ಮ ಹಾಲೇಶಪ್ಪ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ, ಕೆ.ಜಿ. ಶಿವಶಂಕರ್, ಹನುಮಂತಪ್ಪ, ಬಿ. ಶಂಭುಲಿಂಗಪ್ಪ, ಕೆ.ಸಿ. ಶ್ರೀನಿವಾಸಮೂರ್ತಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.