ADVERTISEMENT

ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆ
ಶಿಕ್ಷಣದಿಂದ ಸಾಮಾಜಿಕ ಪರಿವರ್ತನೆ   

ಆನೇಕಲ್: ಶಿಕ್ಷಣದಿಂದ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ ಹಾಗಾಗಿ ಸಮಾಜ ಕಲ್ಯಾಣ ಇಲಾಖೆಯು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ನುಡಿದರು. ಅವರು ತಾಲ್ಲೂಕಿನ ಚೊಕ್ಕಸಂದ್ರದಲ್ಲಿ ಐದು ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ ಹಾಗೂ ಆಶ್ರಮ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ಸಲುವಾಗಿ 600 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಗೆ 6350 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಒದಗಿಸಿದ್ದು ಇದರಿಂದ ಇಲಾಖೆಯಲ್ಲಿ ಉತ್ತಮ ಕಾರ್ಯಗಳು ರೂಪಿತವಾಗಿವೆ ಎಂದರು.

ಕೇಂದ್ರ ಸರ್ಕಾರದ ನೆರವಿನಿಂದ ತಲಾ 12 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ 8 ಏಕಲವ್ಯ ಶಾಲೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆಯಲಾಗುವುದು ಎಂದು ನುಡಿದರು.  ಶಿಕ್ಷಕರು ಹಾಗೂ ವಾರ್ಡ್‌ನ್‌ಗಳು ಕಡ್ಡಾಯವಾಗಿ ವಸತಿ ಶಾಲೆಗಳಲ್ಲಿ ವಾಸ್ತವ್ಯ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಸಲುವಾಗಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ವೃತ್ತಿ ಶಿಕ್ಷಣ ತರಬೇತಿ ಕೇಂದ್ರಗಳನ್ನು ತೆರೆಯುವ ಚಿಂತನೆ ಮಾಡಲಾಗಿದೆ.

ಪ್ರಾಯೋಗಿಕವಾಗಿ ಆನೇಕಲ್‌ನಲ್ಲಿ ಕೇಂದ್ರ ತೆರೆಯಲಾ ಗುವುದು ಟೈಲರಿಂಗ್, ಎಲೆಕ್ಟ್ರಾನಿಕ್ಸ್, ಮೊಬೈಲ್ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಬಿ.ಟಿ.ದಯಾನಂದರೆಡ್ಡಿ ಅವರು ಮಾತನಾಡಿ ‘ಶಿಕ್ಷಣ ಕೇವಲ ಪ್ರಮಾಣ ಪತ್ರಕ್ಕೆ ಸೀಮಿತವಾಗಬಾರದು ವ್ಯಕ್ತಿಯ ಬದುಕನ್ನು ರೂಪಿಸುವ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ವಸತಿ ಶಾಲೆಗಳು ಉತ್ತಮ ಶಿಕ್ಷಣ ನೀಡಲು ಸಹಕಾರಿಯಾಗಿವೆ. ಇಂತಹ ಹೆಚ್ಚು ಹೆಚ್ಚು ಶಾಲೆಗಳು ಪ್ರಾರಂಭವಾಗಬೇಕು ಎಂದರು. ಗ್ರಾಮೀಣ ಮತ್ತು ನಗರ ಹಾಗೂ ಶ್ರೀಮಂತರ ಮಕ್ಕಳು ಮತ್ತು ಬಡವರ ಮಕ್ಕಳಿಗೆ ಸಮಾನ ಶಿಕ್ಷಣ ದೊರೆಯುವಂತಾಗಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಯಪ್ಪ, ಉಪಾಧ್ಯಕ್ಷೆ ಅನ್ನಪೂರ್ಣ ಕೃಷ್ಣಮೂರ್ತಿ, ಕಿಯೋನಿಕ್ಸ್ ಅಧ್ಯಕ್ಷ ಯಂಗಾರೆಡ್ಡಿ, ಆನೇಕಲ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ಎ.ಪಿ.ಎಂ.ಸಿ ಅಧ್ಯಕ್ಷ ಮಹದೇವಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೀ ನಟರಾಜ್, ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಸದಸ್ಯರಾದ ವಿ.ಮುರಳಿಕೃಷ್ಣ, ಕೆ.ನಾರಾಯಣ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆಂಜಿನಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜು, ಯುವ ಮೋರ್ಚಾ ಅಧ್ಯಕ್ಷ ಸೋಮಶೇಖರ್, ಎಸ್.ಆರ್.ಟಿ ಅಶೋಕ್‌ರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಕೆ.ಎನ್.ಚಂದ್ರಶೇಖರ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕೆ.ಪಿ.ಪಾಟೀಲ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಸವರಾಜಯ್ಯ, ತಾಲ್ಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ಬಾಬು ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.