ಚಿತ್ರದುರ್ಗ: ಶಿಕ್ಷಣದಲ್ಲಿ ಕೇಸರೀಕರಣದ ಹುನ್ನಾರವನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಒನಕೆ ಓಬವ್ವ ವೃತ್ತದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಪ್ರತಿಕೃತಿ ದಹನ ಮಾಡಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ರಾಜ್ಯ ಸರ್ಕಾರ 5 ಮತ್ತು 8ನೇ ತರಗತಿಯ ಪಠ್ಯಪುಸ್ತಕಗಳ ಪರಿಷ್ಕರಣೆಯ ಹೆಸರಿನಲ್ಲಿ ಕೋಮುದ್ವೇಷ ಕೆರಳಿಸುವ ಹುನ್ನಾರ ನಡೆದಿದೆ. ಜಾತಿ ಭೇದ ಮತ್ತು ಪಂಕ್ತಿ ಭೇದವನ್ನು ಈಗಲೂ ಅನುಸರಿಸುತ್ತಿರುವ ಕೆಲವು ಮಠಗಳನ್ನು ದಾರಿದೀಪಗಳೆಂದು ಬಣ್ಣಿಸಲಾಗಿದೆ. ಸಂಘ ಪರಿವಾರದ ರಹಸ್ಯ ಕಾರ್ಯಸೂಚಿ ಸಿದ್ಧಾಂತಗಳನ್ನು ಅಳವಡಿಸುವ ಪ್ರಯತ್ನ ಪಠ್ಯಪುಸ್ತಕಗಳಲ್ಲಿ ನಡೆದಿದೆ ಎಂದು ಮುಖಂಡರು ದೂರಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆ ಇರುವ ವ್ಯಕ್ತಿಗಳನ್ನು ಪಠ್ಯಪುಸ್ತಕ ರಚನಾ ಸಮಿತಿಗಳಿಗೆ ಸೇರಿಸಲಾಗಿದೆ. ಜಾತಿ, ಧರ್ಮದ ಅರಿವೇ ಇಲ್ಲದ ಮಕ್ಕಳಲ್ಲಿ ಧರ್ಮದ ಗೋಡೆಗಳನ್ನು ಕಟ್ಟಲಾಗುತ್ತಿದೆ. ವಿಜ್ಞಾನ- ತಂತ್ರಜ್ಞಾನವನ್ನು ಮರೆಮಾಚಿ ಕೇವಲ ಪೂಜೆ, ಯಜ್ಞ-ಯಾಗಗಳ ಪ್ರಸ್ತಾಪ ವನ್ನು ಪಠ್ಯದೆಲ್ಲೆಡೆ ವಿಜೃಂಭಿಸಲಾಗಿದೆ. ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಕಲ್ಪನೆಯನ್ನು ಮತ್ತಷ್ಟು ಗಟ್ಟಿಗೊಳಿಸ ಲಾಗಿದೆ. ಮುಗ್ಧ ಜನರ ಆಧ್ಯಾತ್ಮಿಕ ಆಚರಣೆಗಳನ್ನು ಹಿಂದುತ್ವದ ಹೆಸರಿನಲ್ಲಿ ದುರುಪಯೋಗಪಡಿಸಿಕೊಳ್ಳಲು ಸಂಘ ಪರಿವಾರ ಹವಣಿಸುತ್ತಿದೆ ಎಂದು ಮುಖಂಡರು ತಿಳಿಸಿದರು.
ಆದ್ದರಿಂದ ಪಠ್ಯಪುಸ್ತಕ ರಚನಾ ಸಮಿತಿಯನ್ನು ತಕ್ಷಣ ರದ್ದುಗೊಳಿಸಿ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಶಿಕ್ಷಣ ತಜ್ಞರು, ವಿಚಾರವಂತರ ನ್ನೊಳಗೊಂಡ ಸಮಿತಿ ನೇಮಿಸಿ ಹೊಸ ಪಠ್ಯಕ್ರಮ ರಚಿಸಬೇಕು ಎಂದು ಆಗ್ರಹಿಸಿದರು.
ಚಿತ್ರದುರ್ಗ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾಲಿದ್ ಹುಸೇನ್, ಸಾದಿಕ್ ಉಲ್ಲಾ, ಎಂ.ಸಿ. ವಿನೂತನ್ ರಾಕೇಶ್, ಮೊಯಿನುದ್ದೀನ್, ರಾಜಪ್ಪ, ಯೋಗೇಶ್‌ಬಾಬು, ನಾಗರಾಜ್, ದೇವರಾಜ್, ಬಿ. ದುರ್ಗ ರಮೇಶ್, ತಿಮ್ಮರಾಯಿ, ಸೈಯದ್, ಕೆಂಚಣ್ಣ, ಸಲೀಂ, ತಿಪ್ಪೇಶ್, ಸತೀಶ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.