ADVERTISEMENT

ಸಂಚಾರ ಸುವ್ಯವಸ್ಥೆಗೆ ಆದ್ಯತೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಗುಲ್ಬರ್ಗ: ನಗರದ ಸಂಚಾರ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತವು ಅನುದಾನ ಕಲ್ಪಿಸುವ ಮೂಲಕ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಹೇಳಿದರು.

ಪೊಲೀಸ್ ಹುತಾತ್ಮರ ದಿನದ ಅಂಗವಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒತ್ತಡದಲ್ಲಿ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ರಕ್ಷಣೆ ಒದಗಿಸುವ ಪೊಲೀಸ್ ಇಲಾಖೆಯ ಸುಧಾರಣೆಗೆ ಇನ್ನಷ್ಟು ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸರಿಗೆ ಆರೋಗ್ಯ, ಮೂಲ ಸೌಕರ್ಯ ಮತ್ತಿತರ  ಹೆಚ್ಚುವರಿ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಕಳೆದ ವರ್ಷ ಒಟ್ಟು 635 ಮಂದಿ ಮತ್ತು ಈ ವರ್ಷ 566 ಪೊಲೀಸರು ಕರ್ತವ್ಯದ ವೇಳೆ ಹುತಾತ್ಮರಾಗಿದ್ದಾರೆ ಎಂದ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಮಹ್ಮದ್ ವಜೀರ್ ಅಹ್ಮದ್, ಪೊಲೀಸರು ಸಾರ್ವಜನಿಕರ ಜೊತೆ ಸೌಹಾರ್ದವಾಗಿ ವರ್ತಿಸಬೇಕು. ಪೊಲೀಸ್ ಠಾಣೆಗಳು ಜನತೆಯ ಕ್ಷೇಮಾಭಿವೃದ್ಧಿ ಕೇಂದ್ರಗಳಾಗಬೇಕು ಎಂದರು.

ರಾಜ್ಯದ ಹೆಡ್ ಕಾನ್‌ಸ್ಟೇಬಲ್‌ಗಳಾದ ವರದರಾಜು, ಯೋಗೇಶ್ವರ್, ವೆಂಕಟೇಶ್, ಬನ್ನಾಣಿ ಹಾಗೂ ಕಾನ್‌ಸ್ಟೇಬಲ್ ಮಹದೇವ್ ಮಾಣಿ ಸೇರಿದಂತೆ ಈ ವರ್ಷ ಹುತಾತ್ಮರಾದ 566 ಸಿಬ್ಬಂದಿ ಹೆಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ ಮಧುಕರ್ ಪವಾರ ಸ್ಮರಿಸಿದರು.

ಅತಿಥಿಗಳು, ಹಿರಿಯ ಅಧಿಕಾರಿಗಳು ಪೊಲೀಸ್ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ಮತ್ತು ಮೌನ ಆಚರಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೊಲೀಸ್ ತಂಡವು ಪಥ ಸಂಚಲನ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.