ADVERTISEMENT

ಸಂತೋಷ್ ಹೆಗ್ಡೆ, ರಾಜ್ಯಪಾಲ ವಿರುದ್ಧ ಆಯನೂರು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರಿತಂತೆ ಹೈಕೋರ್ಟ್ ನೀಡಿದ ಆದೇಶ ನ್ಯಾ.ಸಂತೋಷ್ ಹೆಗ್ಡೆ ಮತ್ತು ರಾಜ್ಯಪಾಲರಿಗೆ ಚಾಟಿ ಏಟು ನೀಡಿದೆ ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಹೇಳಿದರು.

ಹೈಕೋರ್ಟ್‌ನ ಈ ಆದೇಶ, ನ್ಯಾ. ಸಂತೋಷ್ ಹೆಗ್ಡೆ ಲೋಕಾಯುಕ್ತ ಸಂಸ್ಥೆಯನ್ನು ನಡೆಸಿದ ರೀತಿಗೆ, ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಸಂತೋಷ್ ಹೆಗ್ಡೆ ವರದಿ ಅತ್ಯಂತ ಏಕಪಕ್ಷೀಯವಾಗಿತ್ತು. ಪ್ರಚಾರಪ್ರಿಯ ಮನೋಭಾವದ ಹೆಗ್ಡೆ ಅವರು ಗಣಿ ವರದಿ ನೀಡುವುದಕ್ಕಿಂತ ಮುಂಚಿತವಾಗಿಯೇ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ನೋಟಿಸ್ ಕೊಟ್ಟು ಉತ್ತರ ಪಡೆಯದೆ ಸಹಜ ನ್ಯಾಯವನ್ನೂ ಮರೆತರು ಎಂದು ಆಯನೂರು ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರ ನಡೆ ಬಗ್ಗೆಯೂ ಹೈಕೋರ್ಟ್ ಅಸಮ್ಮತಿ ಸೂಚಿಸಿದೆ. ಈಗಾಗಲೇ ಅಪರಾಧಿ ಸ್ಥಾನದಲ್ಲಿರುವ ರಾಜ್ಯಪಾಲರು ಕೂಡಲೇ ರಾಜೀನಾಮೆ ನೀಡಿ ಸಂವಿಧಾನವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.