ADVERTISEMENT

ಸಂಭ್ರಮದ ಯುಗಾದಿ, ಚಂದ್ರ ದರ್ಶನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2011, 19:30 IST
Last Updated 5 ಏಪ್ರಿಲ್ 2011, 19:30 IST
ಸಂಭ್ರಮದ ಯುಗಾದಿ, ಚಂದ್ರ ದರ್ಶನ
ಸಂಭ್ರಮದ ಯುಗಾದಿ, ಚಂದ್ರ ದರ್ಶನ   

ದಾವಣಗೆರೆ: ಜಿಲ್ಲೆಯಾದ್ಯಂತ ಜನತೆ ಸಂಭ್ರಮದಿಂದ ಯುಗಾದಿ ಆಚರಿಸಿದರು. ಮಂಗಳವಾರ ಸಂಜೆ ವೇಳೆಗೆ ಚಂದ್ರ ದರ್ಶನ ಮಾಡಿ ಪುನೀತಭಾವ ಹೊಂದಿದರು.

ಸೋಮವಾರ ಯುಗಾದಿ ಆಚರಿಸಿದ್ದರೂ ಸಂಜೆ ವೇಳೆಗೆ ಚಂದ್ರದರ್ಶನ ಸಮರ್ಪಕವಾಗಿ ಆಗದ ಹಿನ್ನೆಲೆಯಲ್ಲಿ ಮಂಗಳವಾರ ಚಂದ್ರದರ್ಶನ ಮಾಡಿದರು. ಮನೆಗಳ ಮುಂಭಾಗ ದೀಪ ಹಚ್ಚಿ ಆರತಿ ಬೆಳಗಿದರು.

ಸೋಮವಾರ ನಗರದಲ್ಲಿ ಯುಗಾದಿ ಸಂಭ್ರಮ ಕಳೆಗಟ್ಟಿತ್ತು. ಮನೆಯ ಮುಂಭಾಗ ಮಾವು-ಬೇವಿನ ತೋರಣದಿಂದ ಶೃಂಗಾರ ಮಾಡಿ ರಂಗೋಲಿ ಹಾಕಲಾಗಿತ್ತು. ಮಕ್ಕಳು, ಯುವಕರು ಹೊಸಬಟ್ಟೆ ಧರಿಸಿ ಹಿರಿಯರ ಆಶೀರ್ವಾದ ಪಡೆದರು. ಯುವಕರ ಪಡೆಯ ಬೈಕ್ ಸವಾರಿಯೂ ಕಂಡುಬಂತು. ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನ, ರಾಂ ಆ್ಯಂಡ್ ಕೋ ವೃತ್ತದ ಬಳಿಯ ಗಣಪತಿ ದೇವಸ್ಥಾನ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಲೇಬರ್ ಕಾಲೊನಿಯ ನಾಟ್ಯಗಣಪತಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ಜೈನ ಮಂದಿರಗಳಲ್ಲಿಯೂ ಇದೇ ಸಂಭ್ರಮ ಕಂಡುಬಂದಿತು. ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು.

ಮನೆಗಳಲ್ಲಿ ಶಾವಿಗೆ ಪಾಯಸ, ಹೋಳಿಗೆ ತಯಾರಿ ಭರ್ಜರಿಯಾಗಿ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಪರಿಕರಗಳಿಗೂ ಪೂಜೆ ಸಲ್ಲಿಸಲಾಯಿತು. ಜನತೆ ಪರಸ್ಪರ ಬೇವು-ಬೆಲ್ಲ ಹಂಚಿ, ಶುಭಾಶಯ ಕೋರಿದರು. ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು. ಇದೇ ವೇಳೆ ಉಚ್ಚಂಗಿದುರ್ಗದಲ್ಲಿ ಜಾತ್ರೆ ಆರಂಭವಾಗಿರುವುದರಿಂದ ಯುಗಾದಿ ಸಂಭ್ರಮ ಮುಗಿಸಿ ಸಂಜೆ ವೇಳೆಗೆ ಜಾತ್ರೆಗೆ ಹೊರಡುತ್ತಿದ್ದ ದೃಶ್ಯ ಕಂಡುಬಂದಿತು. ನಗರದ ಬಹುತೇಕ ಅಂಗಡಿ ಮಳಿಗೆಗಳೂ ಮುಚ್ಚಿದ್ದವು. ಈ ಬಾರಿಯ ಯುಗಾದಿ ಸಂಭ್ರಮಕ್ಕೆ ಭಾರತ ವಿಶ್ವಕಪ್ ಜಯಿಸಿದ ಸಂಭ್ರಮವೂ ಸೇರಿಕೊಂಡಿತ್ತು. ಕೆಲವು ಯುವಕರು ಗುಂಪು ಸೇರಿ ಬೇವು-ಬೆಲ್ಲದ ಜತೆಗೆ ಸಿಹಿ ಹಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.