ADVERTISEMENT

ಸಂಭ್ರಮದ ವಾಲ್ಮೀಕಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ, ಸಡಗರದಿಂದ ಮಂಗಳವಾರ ನಗರದಲ್ಲಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿವಿಧ ಕಲಾ ತಂಡಗಳೊಂದಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಆನಂದ ವಸಂತ ಅಸ್ನೋಟಿಕರ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಸಮಾರಂಭ ನಡೆದ ಹಳೇ ಮಾಧ್ಯಮಿಕ ಶಾಲಾ ಮೈದಾನಕ್ಕೆ ತಲುಪಿತು.
 
ಮೆರವಣಿಗೆ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಲಾಯಿತು.

ಜಿಲ್ಲೆಯ ವಿವಿಧೆಡೆಯಿಂದ ಕಲಾತಂಡಗಳು, ನಾಗರಿಕರು, ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಸೋಮನಕುಣಿತ, ಡೊಳ್ಳು ಕುಣಿತ, ತಮಟೆ, ಖಾಸಬೇಡರ ಪಡೆ ಮತ್ತಿತರರ ಕಲಾ ತಂಡಗಳು ಗಮನಸೆಳೆದವು.

ಮೆರವಣಿಗೆ ನಂತರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ, ಮಹರ್ಷಿ ವಾಲ್ಮಿಕಿ ಒಂದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಕ್ಕೂ ಸೇರಿದವರಾಗಿದ್ದಾರೆ.
ಹಿಂದುಳಿದವರು, ಪರಿಶಿಷ್ಟರು ಸಂಘಟನೆಯಾಗಬೇಕು. ವಾಲ್ಮೀಕಿ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಕರೆ ನೀಡಿದರು.

ಎಲ್.ಜಿ. ಹಾವನೂರು, ದೇವರಾಜ ಅರಸು ಅವರಂತಹ ವ್ಯಕ್ತಿಗಳು ಹಿಂದುಳಿದವರ, ಶೋಷಿತರ ದನಿಯಾಗಿದ್ದರು. ಆದರೂ, ಹಾವನೂರು ಅಂಥವರು ಚಿತ್ರದುರ್ಗ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಎರಡು ಬಾರಿ ಪರಾಭವಗೊಂಡರು ಎಂದು ನುಡಿದರು.

ಮಕ್ಕಳಿಗೆ ರಾಮಾಯಣ ತಿಳಿಸಬೇಕು. ಬುಡಕಟ್ಟು ಜನಾಂಗದವರಿಗೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ಕಾರಿ ಯೋಜನೆಗಳನ್ನು ಮತ್ತು ಮೀಸಲಾತಿಯನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.