ADVERTISEMENT

ಸಂಭ್ರಮದ ಹೊನ್ನಾರು ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಕುಶಾಲನಗರ: ತಾಲ್ಲೂಕಿನ ಹೆಬ್ಬಾಲೆಯಲ್ಲಿ ಯುಗಾದಿ ಹಬ್ಬದ ಅಂಗವಾಗಿ ಭಾನುವಾರ `ಹೊನ್ನಾರು~ ಉತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ರೈತರು ಕೃಷಿಗೆ ಬಳಸುವ ಉಪಕರಣ, ಎತ್ತು, ದನಕರುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಉತ್ಸವಕ್ಕೆ ಚಾಲನೆ ನೀಡಲಾಯಿತು.

ಗ್ರಾಮದ ಬಸವೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆ ಬನಶಂಕರಿ ದೇವಾಲಯದ ವರೆಗೆ ಸಾಗಿತು. ನಂತರ ರೈತರು ತಮ್ಮ ಜಮೀನಿಗೆ ತೆರಳಿ ಹೊಸ ವರ್ಷದ ಉಳುಮೆ ಆರಂಭಿಸಿದರು. ಹಬ್ಬದ ಅಂಗವಾಗಿ ರೈತರಿಗೆ ಏರ್ಪಡಿಸಿದ್ದ ಎತ್ತಿನಗಾಡಿ ಓಟದ ಸ್ಪರ್ಧೆ ಗಮನ ಸೆಳೆಯಿತು.

ಎತ್ತಿನ ಗಾಡಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ, ನಮ್ಮ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ ರೈತರ ಪಾಲಿನ ಚಿನ್ನದ ಹಬ್ಬವಾಗಿದೆ. ಇಂತಹ ಉತ್ಸವದ ಮೂಲಕ ಗ್ರಾಮೀಣ ಸಂಸ್ಕೃತಿ ಪುನರುಜ್ಜೀವನಗೊಳಿಸಬೇಕು ಎಂದರು.

 ಆಧುನಿಕತೆ, ಜಾಗತೀಕರಣದ ಪ್ರಭಾವದ ನಡುವೆಯೂ ಹೊನ್ನಾರು ಉತ್ಸವದಂತಹ ಆಚರಣೆ ಇನ್ನೂ ಉಳಿದಿರುವುದು ಸಂತೋಷದ ಸಂಗತಿ ಎಂದರು.

ಉತ್ಸವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್.ರಾಜಶೇಖರ್, ದೇವಾಲಯ ಸಮಿತಿ ಅಧ್ಯಕ್ಷ    ಎಚ್.ಎನ್.ಬಸವರಾಜು, ಕಾರ್ಯದರ್ಶಿ ರಾಜು, ಶ್ರೀನಿವಾಸ್, ಚೇತನ್ ಇತರರು ಇದ್ದರು.

ಹೊನ್ನಾರು ಉತ್ಸವದಲ್ಲಿ ಸುಮಾರು 140ಕ್ಕೂ ಹೆಚ್ಚು ಜೋಡಿ ಎತ್ತುಗಳು ಪಾಲ್ಗೊಂಡವು. ಉತ್ಸವದ ಅಂಗವಾಗಿ ರೈತರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.