ADVERTISEMENT

ಸಂಶೋಧನಾ ಲೇಖನ ಪ್ರಕಟಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 19:10 IST
Last Updated 20 ಜನವರಿ 2011, 19:10 IST

ದಾವಣಗೆರೆ: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸುವುದು ಮಹತ್ವದ್ದಾಗಿದೆ ಎಂದು ಇಂಗ್ಲೆಂಡ್‌ನ ಬೋಲ್ಟನ್ ವಿವಿಯ ಪ್ರಾಧ್ಯಾಪಕ ಪ್ರೊ.ನರಸಿಂಹನ್ ಅಭಿಪ್ರಾಯಪಟ್ಟರು.

ಬಿಐಇಟಿ ಎಂಬಿಎ ಪ್ರೋಗ್ರಾಂ, ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ವತಿಯಿಂದ ನಗರದ ಬಾಪೂಜಿ ಬಿ-ಸ್ಕೂಲ್ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ, ಜರ್ನಲ್‌ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಕುರಿತಾದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಿಗೂ ಅಂತರರಾಷ್ಟ್ರೀಯಮಟ್ಟದ ಜರ್ನಲ್‌ಗಳಲ್ಲಿ ಲೇಖನಗಳನ್ನು ಪ್ರಕಟಿಸುವುದಕ್ಕೂ ವ್ಯತ್ಯಾಸವಿದೆ. ಅಂಥ ಲೇಖನಗಳನ್ನು ಬರೆಯುವ ಮೂಲಕ ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಕರೆ ನೀಡಿದರು.

ದಾವಣಗೆರೆ ವಿವಿಯ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಪ್ರೊ. ಬಿ. ಬಕ್ಕಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪರಿಣಾಮಕಾರಿಯಾಗಿ ಬೋಧನೆ ಮಾಡುವ ಶಿಕ್ಷಕರು ಕಡಿಮೆಯಾಗಿದ್ದಾರೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಮೀಸಲಾದ ಸಂಸ್ಥೆಯೊಂದನ್ನು ಆರಂಭಿಸುವ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದರು. ಬಾಪೂಜಿ ಬಿ-ಸ್ಕೂಲ್ ಅಧ್ಯಕ್ಷ ಎ.ಎಸ್. ವೀರಣ್ಣ ಮಾತನಾಡಿದರು. ಎಚ್.ವಿ. ತ್ರಿಭುವನನ್ ಹಾಜರಿದ್ದರು.

ಬಾಪೂಜಿ ಬಿ-ಸ್ಕೂಲ್ ನಿರ್ದೇಶಕ ಪ್ರೊ.ಆರ್.ಜಿ. ಪಾಟೀಲ್ ಸ್ವಾಗತಿಸಿದರು. ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಕಾಲೇಜಿನ ಪ್ರಾಂಶುಪಾಲ ಡಾ.ಟಿ. ಮಂಜುನಾಥ ವಂದಿಸಿದರು. ಕಾಲೇಜಿನ ಮುಖ್ಯ ಗ್ರಂಥಪಾಲಕ ಸಿ.ಎಂ. ಹಿರೇಮಠ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.