ADVERTISEMENT

ಸಗಣಿ ಸುರಿದುಕೊಂಡು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST
ಸಗಣಿ ಸುರಿದುಕೊಂಡು ಪ್ರತಿಭಟನೆ
ಸಗಣಿ ಸುರಿದುಕೊಂಡು ಪ್ರತಿಭಟನೆ   

ಗದಗ: ರೈಲು ಸೌಲಭ್ಯ ಹೆಚ್ಚಿಸಲು ಒತ್ತಾಸಿ ಸಗಣಿಯನ್ನು ಮೈಮೇಲೆ ಸುರಿದುಕೊಂಡು ಉರುಳುಸೇವೆ ಮಾಡುವ ಮೂಲಕ ಕರ್ನಾಟಕ ರಾಜ್ಯ ಬ್ರಾಡ್‌ಗೇಜ್ ರೈಲ್ವೆ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ನಗರದ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ  ಅಧ್ಯಕ್ಷ ಕುತುಬುದ್ದೀನ್ ಖಾಜಿ ಹಾಗೂ ಇತರರು ಸೆಗಣಿ ಸುರಿದುಕೊಂಡು  ಉರುಳುಸೇವೆ ಮಾಡಿದರು. ರೈಲ್ವೆ ಅಧಿಕಾರಿಗಳಿಗೆ ಈವರೆಗೆ ನೀಡಲಾಗಿದ್ದ ಮನವಿಪತ್ರಗಳನ್ನು ಸುಟ್ಟರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೊಸದಾಗಿ ಮನವಿ ಸ್ವೀಕರಿಸುವಂತೆ ಪಟ್ಟುಹಿಡಿದರು.

`ಗದಗ ರೈಲು ಮಾರ್ಗ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡ ನಂತರ ಇಲ್ಲಿನ ವಿವಿಧ ರೈಲು ಸಂಚಾರ ಸೌಲಭ್ಯ ಹಾಗೂ ಮೂಲ ಸೌಕರ್ಯಗಳಿಗಾಗಿ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು 10-15 ದಿನಗಳ ಒಳಗಾಗಿ ಅಧಿಕಾರಿಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳು ನಮ್ಮ ಬೇಡಿಕೆ ಈಡೇರಿಸಬೇಕು.

ಇಲ್ಲದಿದ್ದರೆ ಇದೇ ನಿಲ್ದಾಣದ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ~ ಎಂದು  ಕುತುಬುದ್ದೀನ್ ಖಾಜಿ ಬೆದರಿಕೆ ಹಾಕಿದರು. ಗದಗದಿಂದ ವಿವಿಧ ಸ್ಥಳಗಳಿಗೆ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಬೇಕು. ಬಾಗಲಕೋಟೆ, ವಿಜಾಪುರ ಕಡೆಗೆ ಬೆಳಿಗ್ಗೆ ವೇಳೆ ರೈಲು ಸಂಚಾರ ಆರಂಭಿಸಬೇಕು.

ಜನಶತಾಬ್ದಿ ರೈಲನ್ನು ಗದಗದವರೆಗೂ ವಿಸ್ತರಿಸಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೈಲ್ವೆ ಇಲಾಖೆ ಟ್ರಾಫಿಕ್ ಇನ್‌ಸ್ಪೆಕ್ಟರ್ ಟಿ.ಕುಮಾರ್ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.