ADVERTISEMENT

ಸಚಿವ ವಿ.ಸೋಮಣ್ಣ ದೇಗುಲ ಮಠಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಕನಕಪುರ: ಕನಕಪುರ ತಾಲ್ಲೂಕಿನವರೇ ಆದ ವಸತಿ ಸಚಿವ ವಿ.ಸೋಮಣ್ಣ ನೂತನ ಮಂತ್ರಿಮಂಡಲದಲ್ಲಿ ವಸತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ದೇಗುಲ ಮಠಕ್ಕೆ ತಮ್ಮ ಪತ್ನಿ ಜೊತೆ ಸೋಮವಾರ ರಾತ್ರಿ ಭೇಟಿ ನೀಡಿ ಶ್ರಿಗಳಿಂದ ಆಶೀರ್ವಾದ ಪಡೆದರು. 

 ಈ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ನೆನೆಪಿಸಿಕೊಂಡ ಅವರು, `ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ದೇಗುಲ ಮಠವನ್ನು ನಾನೆಂದೂ ಮರೆಯುವುದಿಲ್ಲ. ಯಾವುದೇ ಹೊಸಕಾರ್ಯ, ಹೊಸ ಜವಬ್ದಾರಿ ಬಂದಾಗ ಮೊದಲಿಗೆ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆಯುತ್ತೇನೆ.

ಅದರಂತೆಯೇ ಈಗಲೂ ನಾನು ಕುಟುಂಬ ಸಮೇತ ಇಲ್ಲಿಗೆ ಬಂದಿದ್ದೇನೆ. ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ~ ಎಂದರು.

`ತಾಲ್ಲೂಕನ್ನು ಗುಡಿಸಲು ರಹಿತ ಮಾಡಬೇಕೆಂದು ಪಣತೊಟ್ಟಿದ್ದೇನೆ. ಈಗ ನೀಡಿರುವ ಆಶ್ರಯ ಮನೆಗಳು ಸಾಲದಿದ್ದರೆ ಅವಶ್ಯವಿರುವ ಇನ್ನಷ್ಟು ಮನೆಗಳನ್ನು ನೀಡುತ್ತೇನೆ. ಜಾತಿ, ಧರ್ಮ ಎಂದು ನೋಡದೆ ಪಕ್ಷಾತೀತವಾಗಿ ಎಲ್ಲಾ ಅರ್ಹರಿಗೂ ನೀಡಲಾಗುವುದು.

ಕನಕಪುರದಲ್ಲಿ ಕೆಎಚ್‌ಬಿ ವತಿಯಿಂದ ಎರಡನೇ ಹಂತದಲ್ಲಿ ಮನೆ ನಿರ್ಮಾಣ ಮಾಡಿ ತಾಲ್ಲೂಕಿನ ಜನತೆಗೆ ಹಂಚಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ರಾಯಸಂದ್ರದಿಂದ ರೈಸ್‌ಮಿಲ್‌ವರೆಗೂ ಭೂಮಿಯನ್ನು ಗುರುತಿಸಲಾಗಿದೆ. ಶೀಘ್ರದಲ್ಲಿಯೇ ಈ ಪ್ರದೇಶದಲ್ಲಿ ಹೌಸಿಂಗ್ ಬೋರ್ಡ್ ಮನೆಗಳನ್ನು ನಿರ್ಮಾಣ ಮಾಡಲಾಗುವುದು~ ಎಂದು ಅವರು ತಿಳಿಸಿದರು. 

 ಕಾಂಗ್ರೆಸ್ ಯುವ ಮುಖಂಡ ಡಿ.ಕೆ.ಸುರೇಶ್, ವಿಜಯದೇವು, ಕೈಲಾಸ್ ಶಂಕರ್, ಜೋಸೆಫ್, ವಿ.ಶ್ರೀನಿವಾಸ್, ಆನಂದ್, ರಾಘು, ವಿಶ್ವಪ್ರಿಯ, ಮಹೇಶ್, ಮಂಜು ಮೊದಲಾದವರು ಸಚಿವರ ಜೊತೆ ಉಪಸ್ಥಿತರಿದ್ದರು.

ತಾಲ್ಲೂಕಿನ ಕುಗ್ರಾಮ ಎನಿಸಿದ ಯಲವನಾಥದಲ್ಲಿ ಜನಿಸಿದ ಸೋಮಣ್ಣನವರು ತುಂಬು ಬಡತನದ ನಡುವೆ ವಿದ್ಯಾಭ್ಯಾಸಕ್ಕಾಗಿ ಆಶ್ರಯಿಸಿದ್ದು. ಹೀಗಾಗಿ ದೇಗುಲಮಠಕ್ಕೆ ಅವರ ಭಕ್ತಿ ಅಪಾರ. ಉತ್ತಮ ವ್ಯಾಸಂಗ ಮಾಡಿ, ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿರುವ ಅವರು ಸದಾ ಈ ಮಠಕ್ಕೆ ಭೇಟಿ ನೀಡುವುದು ವಾಡಿಕೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.