ADVERTISEMENT

ಸತ್ತವರ ಹೆಸರಲ್ಲಿ ಸಾರ್ಥಕ ಸಂಪ್ರದಾಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2013, 5:24 IST
Last Updated 17 ಫೆಬ್ರುವರಿ 2013, 5:24 IST
ಸತ್ತವರ ಹೆಸರಲ್ಲಿ ಸಾರ್ಥಕ ಸಂಪ್ರದಾಯ
ಸತ್ತವರ ಹೆಸರಲ್ಲಿ ಸಾರ್ಥಕ ಸಂಪ್ರದಾಯ   

ಸತ್ತವರಿಗೆ ಸದ್ಗತಿ ಸಿಗಲೆಂದು ಅವರ ಸಂಬಂಧಿಕರು ಮೃತರ ಹೆಸರಲ್ಲಿ ದಾನ, ಧರ್ಮ ಮಾಡುವುದು, ಹರಿಕಥೆ ಮಾಡಿಸುವುದು, ತಿಥಿ ಊಟ ಹಾಕಿಸುವುದು ಸಾಮಾನ್ಯ. ಆದರೆ ಶ್ರೀನಿವಾಸಪುರ ತಾಲ್ಲೂಕಿನ ಅಕ್ಕಪಕ್ಕದ ಗ್ರಾಮಗಳಾದ ಗಾಂಡ್ಲಹಳ್ಳಿ ಮತ್ತು ಬಂಗವಾದಿಯಲ್ಲಿ ಮೃತರ ಆತ್ಮಶಾಂತಿಗಾಗಿ ಕಲ್ಲೊಂದನ್ನು ನೆಡುವ ವಿಶೇಷ ಸಂಪ್ರದಾಯವೊಂದು ಬಹಳ ಹಿಂದಿನಿಂದಲೂ ನಡೆದು ಬಂದಿದೆ.

  ಈ ಗ್ರಾಮಗಳಲ್ಲಿ ಸತ್ತ ವ್ಯಕ್ತಿಯ ಕಳೇಬರವನ್ನು ಸ್ಮಶಾನಕ್ಕೆ ಕೊಂಡೊಯ್ದು ಹೂಳುತ್ತಾರೆ. ಮರುದಿನ ನಾಲ್ಕೈದು ಅಡಿ ಎತ್ತರದ ಕಲ್ಲಿನ ಮೇಲೆ ಮೃತ ವ್ಯಕ್ತಿಯ ಹೆಸರು ಹಾಗೂ ಮೃತಪಟ್ಟ ದಿನಾಂಕವನ್ನು ಕೆತ್ತಿಸಿ, ಗ್ರಾಮದ ದನ ಮಂದೆಯಲ್ಲಿ ನೆಡುತ್ತಾರೆ. ಅಷ್ಟಾಗಿ ಅಕ್ಷರ ಜ್ಞಾನ ಇಲ್ಲದ ಕಾಲದಲ್ಲಿ ಕಲ್ಲುಗಳನ್ನು ಹಾಗೆಯೇ ನೆಡಲಾಗಿದೆ.

  ಇಂತಹ ಕಲ್ಲುಗಳನ್ನು ಈ ಎರಡು ಗ್ರಾಮಗಳ ಹೊರವಲಯದ ದನಮಂದೆಯಲ್ಲಿ ನೋಡಬಹುದಾಗಿದೆ. ದನಮಂದೆ ಎಂದರೆ ಕಾಡಿಗೆ ಮೇಯಿಸಲು ಹೋಗುವ ಮುನ್ನ ಗ್ರಾಮದ ಎಲ್ಲ ದನಗಳನ್ನೂ ಒಂದೆಡೆ ಕೂಡುಹಾಕುವ ಸ್ಥಳ. ಹಾಗೆ ಕೂಡುಹಾಕಿದ ಹಸು, ಎಮ್ಮೆ, ಎತ್ತು, ಕುರಿ ಮತ್ತು ಮೇಕೆಗಳು ಈ ಕಲ್ಲುಗಳಿಗೆ ತಮ್ಮ ಮೈಯನ್ನು ಉಜ್ಜಿ ತುರಿಕೆ ನಿವಾರಿಸಿಕೊಳ್ಳುತ್ತವೆ.

  ದನಗಳು ಹೀಗೆ ಮಾಡುವುದರಿಂದ ಮೃತ ವ್ಯಕ್ತಿಗಳಿಗೆ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಇದೆ. ಆದ್ದರಿಂದಲೇ ಅವರು ಈ ಸಂಪ್ರದಾಯವನ್ನು ಶತಮಾನಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗಾಗಿ ದನಮಂದೆಯಲ್ಲಿನ ಕಲ್ಲುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

  ಬಹಳ ಹಿಂದೆ ಒರಟು ಕಲ್ಲುಗಳನ್ನು ನೆಟ್ಟಿದ್ದರೆ, ಇತ್ತೀಚಿನ ದಿನಗಳಲ್ಲಿ ಸ್ಥಿತಿವಂತರು ಸಾಮಾನ್ಯ ಕಲ್ಲಿಗೆ ಬದಲಾಗಿ ಗ್ರಾನೈಟ್ ಮೇಲೆ ವ್ಯಕ್ತಿ ಸತ್ತ ದಿನಾಂಕ ಹಾಗೂ ಹೆಸರನ್ನು ಕೆತ್ತಿಸಿ ನೆಡಲು ಪ್ರಾರಂಭಿಸಿದ್ದಾರೆ.

  ಹಿಂದೆ ಹಳ್ಳಿಯ ಪ್ರತಿ ಮನೆಯಲ್ಲೂ ಹೆಚ್ಚಿನ ಸಂಖ್ಯೆಯ ಜಾನುವಾರುಗಳು ಇರುತ್ತಿದ್ದವು. ಸುತ್ತಲೂ ಕಾಡು, ಮುಳ್ಳು, ಕಳ್ಳಿಯ ಪೊದೆಗಳು ಇದ್ದವು. ಜಾನುವಾರುಗಳನ್ನು ಮೇಯಲು ಬಿಟ್ಟಾಗ ಅವು ಮುಳ್ಳಿನ ಪೊದೆಗಳು ಹಾಗೂ ಕಳ್ಳಿ ಗಿಡಗಳಿಗೆ ಮೈಯನ್ನು ಉಜ್ಜಿ ಗಾಯ ಮಾಡಿಕೊಳ್ಳುತ್ತಿದ್ದವು. ಹಾಗೆ ಗಾಯ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಹಿರಿಯರು ದನಮಂದೆಯಲ್ಲಿ ಕಲ್ಲುಗಳನ್ನು ನೆಡುವ ಸಂಪ್ರದಾಯವನ್ನು ಜಾರಿಗೆ ತಂದರು ಎಂದು ಬಂಗವಾದಿ ಗ್ರಾಮದ ಹಿರಿಯರು ತಮ್ಮ ಹಿರಿಯರನ್ನು ಉಲ್ಲೇಖಿಸಿ ಹೇಳುತ್ತಾರೆ.

  ಸುಮ್ಮನೆ ಕಲ್ಲನ್ನು ನೆಡಿ ಎಂದರೆ ಜನ ಸ್ಪಂದಿಸದಿರಬಹುದು. ಆದ್ದರಿಂದಲೇ ಹಿರಿಯರು, ಸತ್ತವರ ಹೆಸರಲ್ಲಿ ದನಮಂದೆಯಲ್ಲಿ ಕಲ್ಲು ನೆಟ್ಟರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆಯನ್ನು ಬಿತ್ತಿ ಹೋಗಿದ್ದಾರೆ. ಈಗ ಈ ಗ್ರಾಮಗಳಲ್ಲಿ ಹಿಂದೆ ಇದ್ದಷ್ಟು ಜಾನುವಾರುಗಳು ಇಲ್ಲದಿದ್ದರೂ ನಂಬಿಕೆ ಮಾತ್ರ ಮುಂದುವರಿದಿದೆ. ಸತ್ತವರ ಹೆಸರಲ್ಲಿ ಕಲ್ಲು ನೆಡುವ ಸಂಪ್ರದಾಯ ಜೀವಂತವಾಗಿದೆ.

  ಈ ಗ್ರಾಮಗಳ ಹಿರಿಯರು ಮೂಕ ಪ್ರಾಣಿಗಳ ಬಗ್ಗೆ ಹೊಂದಿದ್ದ ಕಾಳಜಿ ಇಂದಿನವರಿಗೆ ಆದರ್ಶವಾಗಿದೆ. ಜಾನುವಾರು ಗ್ರಾಮೀಣ ಜನ ಜೀವನದ ಅವಿಭಾಜ್ಯ ಅಂಗ. ಕೃಷಿ ಮತ್ತು ಗ್ರಾಮೀಣ ಆರ್ಥಿಕಾಭಿವೃದ್ಧಿಯಲ್ಲಿ ಅವುಗಳ ಪಾತ್ರ ಹಿರಿದು. ಅವುಗಳ ಯೋಗ- ಕ್ಷೇಮ, ಕಾಳಜಿ ಕುರಿತು ಗಾಂಡ್ಲಹಳ್ಳಿ ಮತ್ತು ಬಂಗವಾದಿ ಗ್ರಾಮಗಳ ಗೋಕಲ್ಲುಗಳು ಸಾರಿ ಹೇಳುತ್ತಿವೆ.

  ಇನ್ನು ಜಾನುವಾರು ಕುಡಿಯುವ ನೀರಿಗಾಗಿ ಗೋಕುಂಟೆ ನಿರ್ಮಿಸುತ್ತಿದ್ದ ಕಾಲವೊಂದಿತ್ತು. ಗೋವುಗಳ ಬಗ್ಗೆ ಕಾಳಜಿ ಇದ್ದ ಜನ ಕಾಡು ಬೀಡಲ್ಲಿ ಗೋಕುಂಟೆ ನಿರ್ಮಿಸಿ ಧನ್ಯರಾಗುತ್ತಿದ್ದರು. ಅಂಥ ಗೋಕುಂಟೆಗಳು ನಿರ್ಮಿಸಿದವರ ಹೆಸರಲ್ಲೇ ಇವೆ. ಅವರ ಹೆಸರು ಬಾಯಿಂದ ಬಾಯಿಗೆ ಹರಿದು ಬಂದು ಗ್ರಾಮೀಣ ಜನರ ಬಾಯಲ್ಲಿ ಉಳಿದುಕೊಂಡಿದೆ.

  ಒಂದು ಕಾಲದಲ್ಲಿ ಗೋವುಗಳ ದಾಹ ತೀರಿಸುತ್ತಿದ್ದ ಕುಂಟೆಗಳು ಇಂದು ಹೂಳು ತುಂಬಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿವೆ. ಕೆಲವು ಕುಂಟೆಗಳು ಒತ್ತುವರಿಗೆ ಒಳಗಾಗಿ ತಮ್ಮ ಇರುವನ್ನು ಕಳೆದುಕೊಂಡಿವೆ.                                                                                                                                              
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.