ರಾಯಚೂರು: ಹಗಲು ಹೊತ್ತಿನಲ್ಲಿ ಕೃಷಿ ಪಂಪ್‌ಸೆಟ್‌ಗೆ 6 ತಾಸು ಸಮರ್ಪಕ ವಿದ್ಯುತ್ ಒದಗಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಂಘಟನೆ ಸದಸ್ಯರು, ಮುಖಂಡರು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ ರಾಯಚೂರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾತ್ರಿ ವೇಳೆ 12 ತಾಸು ಸಿಂಗಲ್ ಫೇಸ್ ವಿದ್ಯುತ್ ಸಮರ್ಪಕವಾಗಿ ದೊರಕಿಸಬೇಕು, ಪಂಪ್‌ಸೆಟ್‌ಗಳಿಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ ಪೂರೈಸಬೇಕು. ಸುಟ್ಟ ಪರಿವರ್ತಕಗಳನ್ನು 24 ತಾಸಿನೊಳಗೆ ದುರಸ್ತಿ ಮಾಡಿ ದೊರಕಿಸಬೇಕು ಎಂದು ಆಗ್ರಹಿಸಲಾಯಿತು.
ಇದರಿಂದ ರೈತರು ಬೆಳೆದ ಬೆಳೆ ಒಣಗುವುದು, ನೀರಿನ ಸಮಸ್ಯೆ ಎದುರಾಗುವುದನ್ನು ತಡೆಯಲು ಸಹಕಾರಿಯಾಗುತ್ತದೆ. ಲಿಂಗಸುಗೂರು ತಾಲ್ಲೂಕಿನ ಕರದರಗಡ್ಡಿ ರೈತರು ಬೆಳೆ ಕಳೆದುಕೊಂಡಿದ್ದು, ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಹಗಲು 6 ತಾಸು ವಿದ್ಯುತ್ ಸರಬರಾಜು ಮಾಡಬೇಕೆಂಬ ಸರ್ಕಾರದ ಆದೇಶವನ್ನು ಜೆಸ್ಕಾಂ ಅಧಿಕಾರಿಗಳು ಉಲ್ಲಂಘಿಸುತ್ತಿದ್ದಾರೆ. ಯದ್ವಾತದ್ವಾ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ರಾತ್ರಿ 12 ತಾಸು ಸಿಂಗಲ್ ಫೇಸ್ ವಿದ್ಯುತ್ ಕೊಡುವ ನಿಯಮವಿದ್ದರೂ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ದೂರಿದರು.
ರಾತ್ರಿ ಕೇವಲ 4 ತಾಸು ಸಿಂಗಲ್ ಫೇಸ್ ವಿದ್ಯುತ್ ಕೊಡುತ್ತಾರೆ. ಹಗಲು ಹೊತ್ತು 6 ತಾಸಿನಲ್ಲಿ 3 ಗಂಟೆಯಷ್ಟು ವಿದ್ಯುತ್ ಇರುವುದಿಲ್ಲ. ಪರಿವರ್ತಕ ಸುಟ್ಟರೆ ತಿಂಗಳಾನುಗಟ್ಟಲೆ ದುರಸ್ತಿ ಮಾಡುವುದಿಲ್ಲ ಎಂದು ವಿವರಿಸಿದರು.
ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ರಾಜ್ಯ ಕಾರ್ಯಾಧ್ಯಕ್ಷ ಅಮರಣ್ಣ ಗುಡಿಹಾಳ, ತಾಲ್ಲೂಕು ಅಧ್ಯಕ್ಷ ನರಸಿಂಗರಾವ ಕುಲಕರ್ಣಿ, ಜಯಪ್ಪಸ್ವಾಮಿ, ವಿರೇಶಗೌಡ, ಶ್ರೀಕಾಂತಗೌಡ, ಬೂದೆಯ್ಯಸ್ವಾಮಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.