ADVERTISEMENT

ಸರ್ಕಾರಗಳ ಮೇಲೆ ನಂಬಿಕೆ ಇಲ್ಲ: ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಹುಬ್ಬಳ್ಳಿ: `ಜನಸಾಮಾನ್ಯರ ಸಮಸ್ಯೆ ಆಲಿಸುವ ಸ್ಥಿತಿಯಲ್ಲಿ ಸರ್ಕಾರಗಳಿಲ್ಲ. ಹೀಗಾಗಿ ಸರ್ಕಾರಗಳ ಮೇಲೆ ನನಗೆ ನಂಬಿಕೆ ಇಲ್ಲ. ಸಾಮಾನ್ಯರು, ನೊಂದವರ ಸಮಸ್ಯೆಗಳನ್ನು ನಿವಾರಿಸಲು ಸೇವಾಸಂಸ್ಥೆಗಳು ತಲೆ ಎತ್ತಬೇಕು' ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.

ಅವ್ವ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ `ಅವ್ವ' ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ದುರಾಡಳಿತದಿಂದಾಗಿ ವ್ಯವಸ್ಥೆ ಕೆಟ್ಟು ಹೋಗಿದೆ. ಸೇವಾಸಂಸ್ಥೆಗಳು ಸ್ಥಾಪನೆಗೊಂಡು ಜನರ ಬೇಡಿಕೆಗಳನ್ನು ಈಡೇರಿಸಬೇಕು. ಬಡವರ ಕೆಲಸ ಮಾಡಿಕೊಡಲು ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಾರೆ. ಕಾನೂನಾತ್ಮಕ ಸೌಲಭ್ಯಗಳನ್ನು ಪಡೆಯಲು ಲಂಚ ಕೊಡಬೇಕಾದ ಸ್ಥಿತಿ ಇದೆ' ಎಂದು ವಿಷಾದಿಸಿದರು.

`2006-07ರಲ್ಲಿ ಬಿಸಿಯೂಟ ಸೇರಿದಂತೆ ಎಂಟು ಯೋಜನೆಗಳಿಗೆ ಕೇಂದ್ರ ಸರ್ಕಾರ ಕೋಟಿಗಟ್ಟಲೆ ರೂಪಾಯಿ ಬಿಡುಗಡೆ ಮಾಡಿತ್ತು. ಸಿಎಜಿ ನೀಡಿದ ವರದಿ ಪ್ರಕಾರ ಆ ವರ್ಷ ವೆಚ್ಚವಾದ 51,000 ಕೋಟಿ ರೂಪಾಯಿಗೆ ದಾಖಲೆಗಳೇ ಇಲ್ಲ. ಅಷ್ಟೊಂದು ಭ್ರಷ್ಟಾಚಾರ ನಮ್ಮ ದೇಶದಲ್ಲಿ ತುಂಬಿ ತುಳುಕುತ್ತಿದೆ' ಎಂದರು.

`ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾದ ಮೇಲೆ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವ ಮನಸ್ಸಿತ್ತು. ಆದರೆ ಸರ್ಕಾರ ಲೋಕಾಯುಕ್ತನಾಗಿ ನೇಮಕ ಮಾಡಿತು. ಆ  ಅವಧಿಯಲ್ಲಿ ಹಲವು ಅವ್ಯವಹಾರ, ದುರಾಡಳಿತಗಳನ್ನು ಕಂಡಿದ್ದೇನೆ. ನಾನೀಗ ಹೋರಾಟಗಾರನಾಗಿದ್ದು, ಬೀದಿಗಿಳಿದಿದ್ದೇನೆ. ನಾನು ನೀಡಿದ ವರದಿ ಎಲ್ಲರಿಗೂ ನನ್ನನ್ನು ಪರಿಚಯಿಸಿತು. ನಾನು ಆ ವರದಿಯಲ್ಲಿ ಸತ್ಯವನ್ನಷ್ಟೇ ಹೇಳಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.