ADVERTISEMENT

ಸಹಕಾರ ಸಂಸ್ಥೆಗಳಿಗೆ ತೆರಿಗೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಬೀದರ್: ನೇರ ತೆರಿಗೆ ಸಂಹಿತೆಯ ಮೂಲಕ ಸಹಕಾರ ಸಂಸ್ಥೆಗಳಿಗೆ ತೆರಿಗೆ ವಿಧಿಸುವ ಪ್ರಸ್ತಾವ ವಿರೋಧಿಸಿ ನಗರದಲ್ಲಿ ಸೋಮವಾರ ಸಹಕಾರ ಸಂಸ್ಥೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಗಾಂಧಿಗಂಜ್ ಸಹಕಾರ ಬ್ಯಾಂಕ್ ಹೊರತುಪಡಿಸಿ ನಗರದಲ್ಲಿನ 30 ಸಹಕಾರಿ ಸಂಸ್ಥೆಗಳು ಕೆಲಸ ನಿರ್ವಹಿಸಲಿಲ್ಲ. ಹೀಗಾಗಿ ಸಂಸ್ಥೆಯ ಗ್ರಾಹಕರು ಪರದಾಡುವಂತಾಯಿತು.

ಸಹಕಾರ ಭಾರತಿ ನೇತೃತ್ವದಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖರು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‌್ಯಾಲಿ ನಡೆಸಿ ಮನವಿ ಪತ್ರ ಸಲ್ಲಿಸಿದರು. ಬರುವ ಏಪ್ರಿಲ್‌ನಿಂದ ನೇರ ತೆರಿಗೆ ಸಂಹಿತೆ ಜಾರಿಗೆ ಬರಲಿದೆ. ಇದರಿಂದ ಸಹಕಾರ ಸಂಸ್ಥೆಗಳು ತೆರಿಗೆ ವಿನಾಯಿತಿಯಿಂದ ವಂಚಿತವಾಗಲಿವೆ ಎಂದು ಕೇಂದ್ರ ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಹಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಗುರುನಾಥ ಜ್ಯಾಂತಿಕರ್, ಜಿಲ್ಲಾ ಸಂಚಾಲಕ ಬಸವರಾಜ ಬುಧೇರಾ, ಕಾರ್ಯದರ್ಶಿ ಸಂಜೀವಕುಮಾರ ಪಾಟೀಲ್, ಗಾಂಧಿಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಶೆಟಕಾರ, ಉಪಾಧ್ಯಕ್ಷ ಸೂರ್ಯಕಾಂತ ಶೆಟಕಾರ, ಪ್ರಮುಖರಾದ ಮಹಮ್ಮದ್ ಸಲೀಮುದ್ದೀನ್, ಮನೋಹರ ಬಕಳೆ, ಪಿ.ವಿ. ಪಾಟೀಲ್, ಸಂಜಯ್ಯ ಕ್ಯಾಸಾ, ಶಿವಕುಮಾರ, ಮಾರುತಿ ಕುಶನೂರೆ  ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.