ADVERTISEMENT

ಸಹಸ್ರಫಣಿ ಪಾರ್ಶ್ವನಾಥನಿಗೆ ಮಹಾ ಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2012, 19:30 IST
Last Updated 25 ಜುಲೈ 2012, 19:30 IST
ಸಹಸ್ರಫಣಿ ಪಾರ್ಶ್ವನಾಥನಿಗೆ ಮಹಾ ಮಸ್ತಕಾಭಿಷೇಕ
ಸಹಸ್ರಫಣಿ ಪಾರ್ಶ್ವನಾಥನಿಗೆ ಮಹಾ ಮಸ್ತಕಾಭಿಷೇಕ   

ವಿಜಾಪುರ: ಇಲ್ಲಿಯ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿ ಮಂದಿರದಲ್ಲಿ ನಿರ್ವಾಣ ಮಹೋತ್ಸವ (ಮುಕುಟ ಸಪ್ತಮಿ) ಅಂಗವಾಗಿ ಬುಧವಾರ ಸಹಸ್ರಫಣಿ ಪಾರ್ಶ್ವನಾಥ ಮೂರ್ತಿಗೆ ಮಹಾ ಮಸ್ತಕಾಭಿಷೇಕ ನೆರವೇರಿಸಲಾಯಿತು.

ಸಹಸ್ರಫಣಿ ಪಾರ್ಶ್ವನಾಥ ದಿಗಂಬರ ಜೈನ ಮಂದಿರ ಟ್ರಸ್ಟ್‌ನಿಂದ ಇದನ್ನು ಹಮ್ಮಿಕೊಳ್ಳಲಾಗಿತ್ತು. ಪಂಡಿತರಾದ ಪ್ರಕಾಶ ಅಗರಖೇಡ, ಪಾರಿಸ್ ಚಿಂತಾಮಣಿ ಉಪಾಧ್ಯೆ ಅವರ ನೇತೃತ್ವ, ಶ್ರಾವಕ-ಶ್ರಾವಕಿಯರ ಹರ್ಷೋದ್ಗಾರ, ಉದಗಾಂವದ ಕುಬೇರ ಚೌಗುಲೆ ಅವರ ಸುಮಧುರ ಸಂಗೀತ-ಭಜನೆಯ ಹಿಮ್ಮೇಳದಲ್ಲಿ ಅತ್ಯಂತ ವೈಭವಯುತವಾಗಿ ಮಹಾಮಸ್ತಕಾಭಿಷೇಕ ನೆರವೇರಿತು.

ಜಲಾಭಿಷೇಕ, ಎಳೆನೀರು, ಕಬ್ಬಿನ ಹಾಲು, ಸರ್ವ ಔಷಧಿ, ಕ್ಷೀರ, ಹಳದಿ, ಅಷ್ಟಗಂಧ, ಚಂದನ, ಕೇಸರದಿಂದ ಅಭಿಷೇಕ ನೆರವೇರಿಸಲಾಯಿತು. ಒಂದೊಂದೇ ಪದಾರ್ಥದಿಂದ ಅಭಿಷೇಕ ನೆರವೇರಿಸಿದಾಗ ಪಾರ್ಶ್ವನಾಥ ಸ್ವಾಮಿಯ ವಿಗ್ರಹ ಬಗೆ ಬಗೆಯ ರೂಪ ತೆಳೆಯುತ್ತಿತ್ತು.

ಆಗ ಆ ಮೂರ್ತಿಯ ವೈಭವ ಕಂಡು ಭಕ್ತರು ಪುಳಕಿತರಾದರು. ಪುಷ್ಪ ವೃಷ್ಟಿಯ ನಂತರ ಚತುಷ್ಕೋನ ಕಳಸದ ಅಭಿಷೇಕ, ರತ್ನ ವೃಷ್ಟಿ, ಮಹಾಮಂತ್ರ ಪಠಣ, ಮಂಗಳಾರತಿ, ಅಷ್ಟದ್ರವ್ಯ ಪೂಜೆ ಜರುಗಿತು. ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿತು. ಮಂದಿರದ ಆವರಣದಲ್ಲಿ ಅಲಂಕೃತ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

`ಈ ಮಹಾ ಮಸ್ತಕಾಭಿಷೇಕದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಕ್ತರು ಪಾಲ್ಗೊಂಡಿದ್ದರು. ವರ್ಷಕ್ಕೆ ನಾಲ್ಕರಿಂದ ಐದು ಬಾರಿ ಈ ರೀತಿಯ ಪೂಜೆ, ಮಹಾ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿದೆ~ ಎಂದು ಟ್ರಸ್ಟ್ ಕಾರ್ಯಾಧ್ಯಕ್ಷ ಡಿ.ಆರ್. ಶಹಾ ಹೇಳಿದರು.

ಉಪಾಧ್ಯಕ್ಷ ಬಿ.ಎನ್. ಕುಚನೂರ, ಪ್ರಮುಖರಾದ ಶೀತಲಕುಮಾರ ಓಗಿ, ಸಾಹಿತಿ ಬಾಳಾಸಾಹೇಬ ಲೋಕಾಪುರ, ರತನಚಂದ ಕೋಟಿ, ಸುಜಾತಾ ಶಾಸ್ತ್ರಿ, ಕಿರಣಗೌಡ ಪಾಟೀಲ (ಅಥಣಿ), ಎಂ.ಆರ್. ತಂಗಾ, ಬಿ.ಆರ್.ಯಲಗುದ್ರಿ, ಸಂಜಯ ಬಾಗೇವಾಡಿ, ಸುಮಿತ್ರಾ ನಿಡಗುಂದಿ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.