ADVERTISEMENT

ಸಾಧಕರ ಚಿಂತನೆಗಳ ಪ್ರಚಾರಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST
ಸಾಧಕರ ಚಿಂತನೆಗಳ ಪ್ರಚಾರಕ್ಕೆ ಸಲಹೆ
ಸಾಧಕರ ಚಿಂತನೆಗಳ ಪ್ರಚಾರಕ್ಕೆ ಸಲಹೆ   

ಆನೇಕಲ್: ಅಂಬೇಡ್ಕರ್, ಬುದ್ಧ, ಬಸವೇಶ್ವರರು ಸಮಾನತೆಗಾಗಿ ಹೋರಾಡಿದ  ಸಾಧಕರು, ಅವರ ತತ್ವ ಚಿಂತನೆಗಳನ್ನು ಎಲ್ಲೆಡೆ ಪ್ರಚಾರ ಮಾಡುವುದು ಅವಶ್ಯ ಎಂದು ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನೇಕಲ್ ಕೃಷ್ಣಪ್ಪ ಸಲಹೆ ನೀಡಿದರು. ತಾಲ್ಲೂಕಿನ ಚೆನ್ನೇನಅಗ್ರಹಾರದಲ್ಲಿ ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ಸಂಘಟನೆ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿ.  ಅಂಬೇಡ್ಕರ್ ಅವರು ದಲಿತರಿಗೆ ಮತದಾನದ ಹಕ್ಕು ಕೊಡಿಸಿದರೆ, ಕಾನ್ಶಿರಾಮ್ ಅವರು ಮತ ಹೇಗೆ ಚಲಾವಣೆ ಮಾಡಬೇಕು ಎಂದು ಮನವರಿಕೆ ಮಾಡಿಕೊಟ್ಟರು. ಇವರ ಆದರ್ಶಗಳ ನೆರಳಿನಲ್ಲಿ ಪಿ.ವಿ.ಸಿ(ಎಸ್) ಸಂಘಟನೆ ಹೋರಾಡುತ್ತಿದೆ. ಗ್ರಾಮಗಳಿಗೆ ಮೂಲ ಸೌಕರ್ಯಕ್ಕಾಗಿ ಹಾಗೂ ಜನರ ನೋವುಗಳಿಗೆ ಸ್ಪಂದಿಸುತ್ತಿದೆ ಎಂದು ನುಡಿದರು.

ಸಿ.ಪಿ.ಎಂ ಮುಖಂಡ ಮಹದೇಶ್ ಮಾತನಾಡಿ, ಸ್ವಾತಂತ್ರ್ಯ ನಂತರವು ದಲಿತರ ಕನಸುಗಳು ನನಸಾಗುತ್ತಿಲ್ಲ. ಶೋಷಣೆ ಮುಂದುವರೆದಿದೆ. ಜಪಾನ್‌ನ ಅಣು ವಿಕಿರಣ ಪ್ರಸರಣ ಜಗತ್ತನ್ನು ಬೆಚ್ಚಿ ಬೀಳಿಸಿದೆ. ವಿದ್ಯುತ್ ಶಕ್ತಿಗಾಗಿ ಅಣು ಶಕ್ತಿಯ ಮೊರೆ ಹೋಗದೆ ಪರ್ಯಾಯ ಇಂಧನಗಳನ್ನು ಬಳಸುವತ್ತ ಗಮನ ಹರಿಸಬೇಕು ಎಂದರು.ಸಂಘಟನೆ ವಿಭಾಗೀಯ ಅಧ್ಯಕ್ಷ ಡಿ.ಮುನಿಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಇಂಡ್ಲವಾಡಿ ಬಸವರಾಜು, ಗ್ರಾ.ಪಂ ಸದಸ್ಯರಾದ ಪುಷ್ಪರಾಜು, ಸೋಮಶೇಖರರೆಡ್ಡಿ ಮಾತನಾಡಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ಪಿಳ್ಳಪ್ಪ, ಅರೇಹಳ್ಳಿ ಅಶ್ವತ್ಥ್, ಜಿ.ಜಗ್ಗೇಶ್, ಅತ್ತಿಬೆಲೆ ಪಿಲ್ಲಪ್ಪ, ಆರ್.ವೆಂಕಟೇಶ್, ಜಯರಾಮಯ್ಯ, ಕೆಂಪಣ್ಣ, ಪುಳ್ಳಪ್ಪ, ಎಂ.ವೆಂಕಟೇಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.