ADVERTISEMENT

ಸಾಮರಸ್ಯದಿಂದ ಮಾತ್ರ ದೇಶ ನಿರ್ಮಾಣ: ಕಲಾಂ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಧಾರವಾಡ: “ಸಮಾಜದಲ್ಲಿ ಸಾಮರಸ್ಯ ಇದ್ದಾಗ ಮಾತ್ರ ಶಿಸ್ತುಬದ್ಧ ದೇಶ ನಿರ್ಮಾಣ ಸಾಧ್ಯ. ಶಿಸ್ತಿನ ನಡವಳಿಕೆಯಿಂದ ನಾವು ಶಾಂತಿ, ಸಹನೆಯಿಂದ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ” ಎಂದು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದರು.

ಇಲ್ಲಿನ ತಪೋವನದಲ್ಲಿ ಮಹಾತಪಸ್ವಿ ಕುಮಾರಸ್ವಾಮಿಗಳ ಜನ್ಮಶತಮಾನೋತ್ಸವ ಹಾಗೂ ಮಹಾಸಮಾಧಿ ದರ್ಶನೋತ್ಸವ ಸಮಾರಂಭ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಜನ್ಮ ದೊಡ್ಡದು ಎಂದು ಪುರಂದರ ತತ್ವವನ್ನು ಪ್ರತಿಪಾದಿಸಿ ಮನುಷ್ಯನಾಗಿ ಮತ್ತೊಬ್ಬರ ಮುಖದ ಮೇಲೆ ಮುಗುಳ್ನಗೆ ಮೂಡಿಸಲು ಪ್ರಯತ್ನಿಸಬೇಕು.
 
ಇದಕ್ಕಾಗಿ ಹೆಚ್ಚು ಹೆಚ್ಚು ತಾಳ್ಮೆ, ನಿಷ್ಠೆ ಹಾಗೂ ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. ಆ ಸೃಷ್ಟಿಕರ್ತ ಎಲ್ಲರ ಹೃದಯದಲ್ಲಿ ಜ್ಞಾನದ ಬೆಳಕು ಹಚ್ಚಲಿ. ವ್ಯಕ್ತಿತ್ವ ಸದೃಢಗೊಳ್ಳಲಿ ಹಾಗೂ ಸಮಾಜ ಛಿದ್ರಗೊಳಿಸುವ ಶಕ್ತಿಗಳನ್ನು ನಾಶಪಡಿಸುವ ಶಕ್ತಿ ನೀಡಲಿ ಎಂದರು. ಅಧ್ಯಾತ್ಮಿಕ ವಲಯದಲ್ಲಿರುವ ತಂದೆ, ತಾಯಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕ ಮಾತ್ರ ಹೃದಯದಲ್ಲಿ ಸನ್ನಡತೆಯ ಸತ್ಯವಂತಿಕೆ ಎಂಬ ಬೀಜ ಬಿತ್ತಲು ಸಾಧ್ಯ.
 
ಹೃದಯದ ಸತ್ಯವಂತಿಕೆ ನಡೆಯಿಂದ ಅತ್ಯುತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಇಂಥ ವ್ಯಕ್ತಿಗಳಿಂದ ಸಮಾಜದಲ್ಲಿ ಸಾಮರಸ್ಯ ಸಾಧ್ಯ ಎಂದು ಡಾ. ಕಲಾಂ ಹೇಳಿದರು. ಇದೇ ಸಂದರ್ಭದಲ್ಲಿ ಕುಮಾರಸ್ವಾಮೀಜಿ ಅವರ ಮರುಮುದ್ರಣಗೊಂಡ `ಯೋಗದ ಆಯಾಮಗಳು~ ಎಂಬ ಪುಸ್ತಕಗಳ ಬಿಡುಗಡೆ ನಡೆಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಚಿವ ಮುರುಗೇಶ ನಿರಾಣಿ, ಸಂಸದ ಪ್ರಹ್ಲಾದ ಜೋಶಿ, ಶಾಸಕ ಬಸವರಾಜ ಪಾಟೀಲ, ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ವೀರಣ್ಣ ಮತ್ತಿಕಟ್ಟಿ, ಮೇಯರ್ ಪೂರ್ಣಾ ಪಾಟೀಲ ವೇದಿಕೆಯಲ್ಲಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಸಚಿವ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.