ADVERTISEMENT

ಸಾಮಾಜಿಕ ಭದ್ರತೆಗೆ ನಾಗರಿಕರ ಮೊರೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ದಾವಣಗೆರೆ: ಅವರು ಅನ್ವರ್ ಪಾಷ. ಅಜಾದ್‌ನಗರದಲ್ಲಿ ವಾಸಿಸುತ್ತಿದ್ದು ಮಂಡಕ್ಕಿಬಟ್ಟಿಯಲ್ಲಿ ಕೆಲಸ ಮಾಡುವಾಗ ಬೆಂಕಿ ಆಕಸ್ಮಿಕದಲ್ಲಿ ಕಣ್ಣು ಕಳೆದುಕೊಂಡಿದ್ದಾರೆ.

ಅವರು ಅಹಮದ್ ಬಾಷ. ಇದ್ದ ಇಬ್ಬರು ಪುತ್ರಿಯರನ್ನು ವಿವಾಹ ಮಾಡಿಕೊಟ್ಟಿದ್ದಾರೆ. ವೃದ್ಧಾಪ್ಯ ಆವರಿಸಿದೆ. ನೋಡಿಕೊಳ್ಳುವವರು ಇಲ್ಲ.

ಇನ್ನೊಬ್ಬರು ಚನ್ನಬಸಮ್ಮ. ಹಳೇ ಚಿಕ್ಕನಹಳ್ಳಿ ವಾಸಿ. ಗಂಡನನ್ನು ಕಳೆದುಕೊಂಡ ಅವರಿಗೆ ಚಿಕ್ಕ ಮಕ್ಕಳನ್ನು ಸಾಕುವ ಜವಾಬ್ದಾರಿ.

-ಇದು ಬುಧವಾರ ತಹಶೀಲ್ದಾರ್ ಕಚೇರಿ ಮುಂದೆ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ನಿರ್ಗತಿಕರ ವೇತನಕ್ಕೆ ಮರು ಅರ್ಜಿ ಸಲ್ಲಿಸಲು ಆಗಮಿಸಿದ್ದ ನಾಗರಿಕರ ಚಿತ್ರಣ.

ಸಾಮಾಜಿಕ ಭದ್ರತಾ ಯೋಜನೆ ಅಡಿ ರೂ 400 ಮಾಸಿಕ ವೇತನ ಪಡೆಯುತ್ತಿದ್ದ ಫಲಾನುಭವಿಗಳನ್ನು ಸರ್ಕಾರ ಭೌತಿಕ ಪರಿಶೀಲನೆ ವೇಳೆ ಕೈಬಿಟ್ಟಿದ್ದು, ನಿಜವಾದ ಫಲಾನುಭವಿಗಳಿಗೆ ಮರು ಆದೇಶ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ತಾಲ್ಲೂಕು ಕಚೇರಿ ಮುಂದೆ `ಅರ್ಜಿ ಕೊಡಿಸುವ ಆಂದೋಲನ~ ಹಮ್ಮಿಕೊಂಡಿತ್ತು.

ಒಂದು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿ ಅರ್ಜಿ ಸಲ್ಲಿಸಿದರು. ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್, ಮುಖಂಡರಾದ ಮುನ್ನಾ ಪೈಲ್ವಾನ್, ಶಫಿ ಅಹಮದ್, ಸತೀಶ್, ಎಚ್.ವೈ. ಶಶಿಧರ್, ಎಚ್.ಸಿ. ಗುಡ್ಡಪ್ಪ, ಅನೀಫ್‌ಪಾಷ್ಕ ಮತ್ತಿತರರು ಉಪಸ್ಥಿತರಿದ್ದರು.

ತಹಶೀಲ್ದಾರ್ ಪ್ರತಿಕ್ರಿಯೆ:
ಪರಿಶೀಲನೆ ವೇಳೆ ಸ್ಥಳದಲ್ಲಿ ವಾಸ ಇಲ್ಲದ ಫಲಾನುಭವಿಗಳ ಮಾಸಾಶನ ರದ್ದುಪಡಿಸಲಾಗಿತ್ತು. ಸರಿಯಾದ ಮಾಹಿತಿ ಜತೆಗೆ ಮತ್ತೆ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಹಲವು ದಿನಗಳಿಂದ ಕಚೇರಿಗೆ ನಿಜವಾದ ಫಲಾನುಭವಿಗಳು ಅರ್ಜಿ ನೀಡುತ್ತಿದ್ದಾರೆ. ಜೆಡಿಎಸ್ ಸಹ ಅಂತಹ ಫಲಾನುಭವಿಗಳಿಂದ ಅರ್ಜಿ ಕೊಡಿಸಿದೆ. ಅವುಗಳನ್ನು ನೆಮ್ಮದಿ ಕೇಂದ್ರಕ್ಕೆ ನೀಡಿ, ಮರು ಆದೇಶ ಮಾಡಲಾಗುವುದು ಎಂದು ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.