ADVERTISEMENT

ಸಿರುಗುಪ್ಪ: ಹೋಬಳಿ ಕೇಂದ್ರಕ್ಕೆ ಆಗ್ರಹಿಸಿ ಬೈಕ್‌ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಆಗ್ರಹಿಸಿ  ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮಂಗಳವಾರ ಸಿರಿಗೇರಿಯಿಂದ ಸಿರುಗುಪ್ಪವರೆಗೆ ಬೈಕ್ ರ‌್ಯಾಲಿ ನಡೆಸಿದರು.

ತಾಲ್ಲೂಕಿನಲ್ಲಿಯೇ ಸಿರಿಗೇರಿ ದೊಡ್ಡ ಗ್ರಾಮ. ಇದನ್ನು ವಿಶೇಷ ಹೋಬಳಿ ಕೇಂದ್ರವೆಂದು ಪರಿಗಣಿಸಿ, ಈ ಹಿಂದೆ ವಿಶೇಷ ಸ್ಥಾನಮಾನ ಒದಗಿಸಿ ಆಡಳಿತಾತ್ಮಕವಾಗಿ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಆದರೆ ಸಕಾರಣವಿಲ್ಲದೆ ಈ ನಿರ್ಧಾರವನ್ನು ಕೈಬಿಟ್ಟು, ಕೇಂದ್ರವನ್ನು ರದ್ದುಗೊಳಿಸಲಾಗಿದೆ ಎಂದು ಗ್ರಾಮಸ್ಥರು ದೂರಿದರು.

ಸಿರಿಗೇರಿ ದೊಡ್ಡ ಗ್ರಾಮ ಪಂಚಾಯಿತಿ. ಜಿಲ್ಲಾ ಪಂಚಾಯ್ತಿ ಕ್ಷೇತ್ರ, ಎಪಿಎಂಸಿ ಅಲ್ಲದೇ ತಾಲ್ಲೂಕು ಪಂಚಾಯಿತಿ ಕ್ಷೇತ್ರವೂ ಇದೆ. ಸುತ್ತಲಿನ 30 ಹಳ್ಳಿಗಳ ವ್ಯಾಪ್ತಿಯನ್ನು ಒಳಗೊಂಡ ಗ್ರಾಮವನ್ನು ಹೋಬಳಿ ಕೇಂದ್ರ ಮಾಡುವುದು ಅತ್ಯಂತ ಸೂಕ್ತ ಎಂದರು.

ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಿದರೆ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗುವುದಲ್ಲದೆ  ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಹಾಯಕ ಎಂದು ಹೇಳಿದರು. ತಹಶೀಲ್ದಾರ್ ಕಚೇರಿಯ ಮುಂದೆ ಬೈಕ್ ರ‌್ಯಾಲಿಯೊಂದಿಗೆ ಆಗಮಿಸಿದ ಪ್ರತಿಭಟನಾಕಾರರು ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿದರು.

ಯುವ ಮುಖಂಡರಾದ ಬಿ. ಅಮರೇಶಗೌಡ, ಎಸ್.ಎಂ. ಅಡಿವಿಸ್ವಾಮಿ, ಎನ್. ವಿರೂಪಾಕ್ಷಪ್ಪ, ಬಿ. ವೀರೇಶಗೌಡ, ಬಿ.ಉಮೇಶ, ಬಿ. ಈರಯ್ಯ, ಶೇಕ್‌ಶಾ ವಲಿ ರ‌್ಯಾಲಿಯ ನೇತೃತ್ವ ವಹಿಸಿದ್ದರು. ಸಿರಿಗೇರಿ, ಮುದ್ದಟನೂರು, ಎಂ.ಸೂಗೂರು, ನಡುವಿ, ಕೊಂಚಗೇರಿ ಮುಂತಾದ ಗ್ರಾಮಗಳ ಹಲವಾರು ಯುವಕರು ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.