ADVERTISEMENT

ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ನಂಜನಗೂಡು: ತಾಲ್ಲೂಕಿನ ಸುತ್ತೂರು ಮಠದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ  ಗುರುವಾರ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಮೇಳ, ರಂಗೋಲಿ ಸ್ಪರ್ಧೆ, ಸೋಬಾನೆ ಪದ ಸ್ಪರ್ಧೆ ಕಾರ್ಯಕ್ರಮದೊಂದಿಗೆ ಶುರುವಾದ ಜಾತ್ರಾ ಮಹೋತ್ಸವ ಜ.24ರ ವರೆಗೆ ಆರು ದಿನಗಳ ಕಾಲ ನಡೆಯಲಿದೆ.

ಸುತ್ತೂರಿನ ರಸ್ತೆಯ ತುಂಬೆಲ್ಲಾ ಬಣ್ಣ ಬಣ್ಣದ ರಂಗೋಲಿಗಳು ಗಮನ ಸೆಳೆದವು. ಸೋಬಾನೆ ಪದ ಸ್ಪರ್ಧೆ ಆರಂಭವಾಗುತ್ತಿದ್ದಂತೆ ಸುತ್ತೂರು ಎಂಬ ಈ ಪುಟ್ಟ ಗ್ರಾಮ ಸೋಬಾನೆಯ ಗುಂಗಿನಲ್ಲಿ ಮುಳುಗಿತು. ಕಪಿಲಾ ನದಿ ದಡದಲ್ಲಿರುವ ಸುತ್ತೂರು ಜಾತ್ರೆಯಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುವುದಿಲ್ಲ. ವಸ್ತು ಪ್ರದರ್ಶನ, ಕೃಷಿ ಮೇಳ, ಜಾನುವಾರು ಮೇಳ ಮುಂತಾದವುಗಳೂ ನಡೆಯುವುದರಿಂದ ನಿಜವಾದ ಅರ್ಥದಲ್ಲಿ ಇಲ್ಲಿ ಜನಜಾತ್ರೆ ನೆರೆಯುತ್ತದೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಸಾಂಸ್ಕೃತಿಕ ಮೇಳ, ರಂಗೋಲಿ ಸ್ಪರ್ಧೆ, ಸೋಬಾನೆ ಪದ ಉದ್ಘಾಟನೆಯೊಂದಿಗೆ ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಕೆ.ಆರ್. ಸುಬ್ಬಣ್ಣ ಮಾತನಾಡಿ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಚಿತ್ರಕಲಾ ಶಾಲೆ ತೆರೆಯಲಾಗುವುದು ಎಂದು ಹೇಳಿದರು. ಜ. 20 ರಂದು 175ಕ್ಕೂ ಅಧಿಕ ಜೋಡಿಗಳ ಸಾಮೂಹಿಕ ವಿವಾಹ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭಾಗವಹಿಸಲಿದ್ದಾರೆ.

 ಜ.21 ರಂದು ಬೆಳಿಗ್ಗೆ 10.45ಕ್ಕೆ ಶಿವಯೋಗಿಗಳ ರಥೋತ್ಸವ ಜರುಗಲಿದೆ. ಜ.23 ರಂದು ರಾತ್ರಿ 9.45ಕ್ಕೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.