ಯಲಬುರ್ಗಾ: ಆರ್ಥಿಕ ಸಂಕಷ್ಟದಲ್ಲಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಅನುಕೂಲವಾಗಲಿರುವ ಸುವರ್ಣಭೂಮಿ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಲಾಟರಿ ಮೂಲಕ ನಡೆಸುವುದು ಪಾರದರ್ಶಕತೆಯ ಸಂಕೇತ ಎಂದು ತಹಸೀಲ್ದಾರ ಈ.ಡಿ. ಭೃಂಗಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುವರ್ಣಭೂಮಿ ಯೋಜನೆಯ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷದ ಫಲಾನುಭವಿಗಳನ್ನು ಹೊರತುಪಡಿಸಿ ಹೊಸಬರಿಗೆ ಅವಕಾಶ ಕೊಡಲಾಗಿದೆ. ಕಳೆದ ಸಾಲಿನ 2ನೇ ಕಂತಿನ ಹಣವನ್ನು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುರೇಶಗೌಡ ಮಾತನಾಡಿ, ಸತತ ಮೂರನೇ ವರ್ಷದ ಬರಗಾಲಕ್ಕೆ ರೈತರು ತೀವ್ರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಅನುದಾನ ಬಿಡುಗಡೆಮಾಡಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ತೋಟಗಾರಿಕೆ ಅಧಿಕಾರಿ ನಜೀರ್‌ಅಹ್ಮದ್ ಮಾತನಾಡಿ, ತೋಟಗಾರಿಕೆಗೆ ಸಂಬಂಧಿಸಿದಂತೆ ನಾಲ್ಕು ಹೋಬಳಿ ಪೈಕಿ 1,374ಅರ್ಜಿಗಳಲ್ಲಿ 77ಎಸ್‌ಸಿ, 31ಎಸ್‌ಟಿ, 380ಇತರರು ಸೇರಿ 488ರೈತರು ಆಯ್ಕೆಯಾಗಲಿದ್ದಾರೆ ಎಂದರು.
ಎರಡು ಕಂತುಗಳಲ್ಲಿ ದೊರೆಯುವ ರೂ. 10 ಸಾವಿರ ಅನುದಾನವನ್ನು ಯೋಜನೆಯ ನಿಯಮದಂತೆ ಬಳಕೆಯಾಗಬೇಕು. ಕೃಷಿ ಇಲಾಖೆಗೆ ಸಂಬಂಧಿಸಿದಂತೆ, 226-ಎಸ್‌ಸಿ, 91-ಎಸ್‌ಟಿ, 1,075ಇತರರು ಸೇರಿ ಒಟ್ಟು 1,392ರೈತರನ್ನು ಆಯ್ಕೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ವೈ.ವೈ. ಕೊರಟಗೇರಿ ನುಡಿದರು.
ಯುವ ಮುಖಂಡ ನವೀನ ಗುಳಗಣ್ಣವರ ಮಾತನಾಡಿದರು. ಅಧಿಕಾರಿಗಳು ಲಾಟರಿ ಮೂಲಕ ವಿವಿಧ ಹೋಬಳಿಯ ರೈತರನ್ನು ಆಯ್ಕೆ ಮಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಾದ ಪದ್ಮನಾಯಕ, ಬಾಲರೆಡ್ಡಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.