ADVERTISEMENT

ಸೂರಿಗಾಗಿ ಸಮರ ಜಾಥಾ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಕಳಸ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಮಿಕರು ಮತ್ತು ಭೂ ಮಾಲೀಕರ ನಡುವೆ ಅಗಾಧ ಅಂತರ ಇದೆ. ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಒಂದು ಹಿಡಿ ಜಾಗವನ್ನೂ ನೀಡದ ಸರ್ಕಾರವು ಭೂಮಾಲೀಕರು ನೂರಾರು ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದರೂ ಮೌನ ವಹಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಸಾತಿ ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಬಡ ಕಾರ್ಮಿಕರಿಗೆ ನಿವೇಶನ ದೊರಕಿಸಲು ನಡೆದಿರುವ ಸೂರಿಗಾಗಿ ಸಮರ ಜಾಥಾ ಭಾನುವಾರ ಕಳಸ ಪಟ್ಟಣಕ್ಕೆ ತಲುಪಿದ ಸಂದರ್ಭದಲ್ಲಿ ಕೆ.ಎಂ.ರಸ್ತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮೂಡಿಗೆರೆ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ವಸತಿ ರಹಿತರ ಪಟ್ಟಿಯಲ್ಲಿ ಸಾವಿರಾರು ಮಂದಿ ಇದ್ದಾರೆ. ಬಾರಿ ಬಾರಿಗೂ ಮನವಿ ಸಲ್ಲಿಸಿ ಹೋರಾಟ ರೂಪಿಸಿದರೂ ಶಾಸಕರು ಮತ್ತು ಎಲ್ಲ ಜನಪ್ರತಿನಿಧಿಗಳು ನಿವೇಶನ ವಿತರಿಸುವ ಗೋಜಿಗೆ ಹೋಗಿಲ್ಲ. ಕಂದಾಯ ಇಲಾಖೆಯೂ ಬಡವರಿಗೆ ಭೂಮಿ ಮಂಜೂರು ಮಾಡದೆ ಕರ್ತವ್ಯಚ್ಯುತಿ ಎಸಗುತ್ತಿದೆ ಎಂದು ಸುಂದರೇಶ್ ಆಪಾದಿಸಿದರು.

ಜಿಲ್ಲೆಯಲ್ಲಿ ಎರಡು ಲಕ್ಷ ಎಕರೆ ಭೂಮಿಯನ್ನು ಬಲಾಢ್ಯರು, ಸಿರಿವಂತ ಬೆಳೆಗಾರರು ಮತ್ತು ರಾಜಕೀಯ ಪುಡಾರಿಗಳು ಒತ್ತುವರಿ ಮಾಡಿದ್ದಾರೆ. ಈ ರೀತಿಯ ಜಮೀನಿನ ಶೇ.10 ಭಾಗವನ್ನು ಬಡವರ ನಿವೇಶನಕ್ಕೆ ಲಭ್ಯವಾಗುವಂತೆ ನೋಡಿಕೊಂಡರೂ ನಿವೇಶನದ ಸಮಸ್ಯೆ ಬಗೆಹರಿದಂತೆ. ಅಧಿಕಾರಿಗಳು ಈ ಬಗ್ಗೆ ಬದ್ಧತೆ ಪ್ರದರ್ಶಿಸಬೇಕಾಗಿದೆ ಎಂದು ಅವರು ಹೇಳಿದರು.

ಮುಖಂಡರಾದ ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್ ಅವರೂ ಮಾತನಾಡಿದರು. ಸಿಪಿಐ ಮತ್ತು ಎಐವೈಎಫ್ ಮುಖಂಡರಾದ ಪೆರಿಯಸ್ವಾಮಿ, ಸುಂಕಸಾಲೆ ರವಿ, ಅಣ್ಣಪ್ಪ, ವಜೀರ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.