ADVERTISEMENT

ಸೂರಿಲ್ಲದೆ ನಲುಗಿದ ಅಂಗನವಾಡಿ ಕೇಂದ್ರಗಳು

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST
ಸೂರಿಲ್ಲದೆ ನಲುಗಿದ ಅಂಗನವಾಡಿ ಕೇಂದ್ರಗಳು
ಸೂರಿಲ್ಲದೆ ನಲುಗಿದ ಅಂಗನವಾಡಿ ಕೇಂದ್ರಗಳು   

ಚಿತ್ರದುರ್ಗ: ಇಲ್ಲಿ ಕುಣಿದು ಕುಪ್ಪಳಿಸಲು ಜಾಗವೇ ಇಲ್ಲ. ಇನ್ನು ಆಟ, ಓಟವಂತೂ ಇಲ್ಲವೇ ಇಲ್ಲ. ಚಿಕ್ಕದಾದ, ಇಕ್ಕಟ್ಟಿನ ಶೆಡ್ ರೀತಿಯ ಕೊಠಡಿಗಳಲ್ಲಿ ಚಿಣ್ಣರು ಬಾಲ್ಯ ಕಳೆಯಬೇಕು.

ಇದು ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿನ ಸ್ಥಿತಿ. ಗುಡಿಸಲುಗಳಂತೆ ಕಾಣುವ ಸಿಮೆಂಟ್ ಅಥವಾ ತಗಡಿನ ಶೀಟುಗಳ ಛಾವಣಿ ಹೊಂದಿರುವ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಸ್ವಂತ ಕಟ್ಟಡ ಇಲ್ಲದೆ ನಲುಗಿರುವ ಅಂಗನವಾಡಿ ಕೇಂದ್ರಗಳಿಗೆ ಅಂಗಣವೇ ಇಲ್ಲ. ಚಿಣ್ಣರಿಗೆ ಚಿಕ್ಕದಾದ ಬಾಡಿಗೆ ಕಟ್ಟಡಗಳಲ್ಲಿಯೇ ತಾತ್ಕಾಲಿಕ ಆಶ್ರಯ ಕಲ್ಪಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 2,300 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ 1,355 ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 945 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ.

ಸ್ವಂತ ಕಟ್ಟಡ ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಶಾಲೆ, ಸಮುದಾಯ ಭವನ, ಗ್ರಾಮ ಪಂಚಾಯ್ತಿ ಕಟ್ಟಡಗಳು, ದೇವಸ್ಥಾನದ ಆವರಣಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇನ್ನೂ ನಗರ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಸಂಪೂರ್ಣ ವಿಭಿನ್ನವಾಗಿದೆ.

ಚಿತ್ರದುರ್ಗ, ಚಳ್ಳಕೆರೆಯಂತಹ ನಗರಗಳಲ್ಲಿ ನಿವೇಶನದ ಕೊರತೆಯಿಂದ ಸ್ವಂತ ಕಟ್ಟಡ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅಧಿಕಾರಗಳ ಅಭಿಪ್ರಾಯ.

ಇನ್ನೂ ಸರ್ಕಾರ ನೀಡುವ ಅಲ್ಪಮೊತ್ತದ ಬಾಡಿಗೆ ಹಣಕ್ಕೆ ಕಟ್ಟಡಗಳೇ ದೊರೆಯುತ್ತಿಲ್ಲ. ಸರ್ಕಾರ ಬಾಡಿಗೆಗಾಗಿ ಕೇವಲ ರೂ 500 ಮಾತ್ರ ನಿಗದಿಪಡಿಸಿದೆ. ಈ ಅಲ್ಪ ಮೊತ್ತಕ್ಕೆ ನಗರಗಳಲ್ಲಿ ಬಾಡಿಗೆ ಕಟ್ಟಡಗಳು ಸಿಗುತ್ತಿಲ್ಲ. ಜತೆಗೆ ಮಾಲೀಕರು ಮುಂಗಡ ಕೇಳುತ್ತಾರೆ. ಇದಕ್ಕೂ ಸರ್ಕಾರ ಅವಕಾಶ ಕಲ್ಪಿಸಿಲ್ಲ. ಇದರಿಂದ ಅಲ್ಪ ಮೊತ್ತಕ್ಕೆ ದೊರೆಯುವ ಕಿರಿದಾದ ಕೊಠಡಿಗಳನ್ನು ಬಾಡಿಗೆ ಪಡೆಯುವುದು ಅನಿವಾರ್ಯವಾಗಿದೆ.

`ಜಿಲ್ಲೆಯಲ್ಲಿ ಈಗ ಹೊಸದಾಗಿ 80 ಅಂಗನವಾಡಿ ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ. ನಗರಗಳಲ್ಲಿ ನಿವೇಶನ ಲಭ್ಯವಾಗದ ಕಾರಣ ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಮುಖ್ಯವಾಗಿ ಎಲ್ಲೆಡೆ ನಿವೇಶನದ್ದೇ ಸಮಸ್ಯೆ~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಜಯಸ್ವಾಮಿ ಹೇಳುತ್ತಾರೆ.

ನಗರಗಳಲ್ಲಿ ಕನಿಷ್ಠ 800ರಿಂದ 1,000 ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 400ರಿಂದ 800 ಜನಸಂಖ್ಯೆ ಹೊಂದಿದ್ದರೆ ಒಂದು ಅಂಗನವಾಡಿ ಕೇಂದ್ರ ತೆರೆಯಲಾಗುತ್ತಿದೆ.
 
ಜತೆಗೆ 150ರಿಂದ 400 ಜನಸಂಖ್ಯೆಗೆ ಮಿನಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ಸಾವಿರ ಜನಸಂಖ್ಯೆಯಲ್ಲಿ  20ರಿಂದ 25 ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುತ್ತಾರೆ. ಆದರೆ, ಈ ಅಂಕಿ-ಸಂಖ್ಯೆಗಳಿಗೆ ತಕ್ಕಂತೆ ಮೂಲ ಸೌಕರ್ಯಗಳು ಚಿಣ್ಣರಿಗೆ ದೊರೆಯುತ್ತಿಲ್ಲ. ಕುಣಿದು, ನಲಿದು ಕುಪ್ಪಳಿಸಲು ಜಾಗವೇ ಇಲ್ಲದಂತಾಗಿದೆ.

ಸೂರಿಲ್ಲದ ಅಂಗನವಾಡಿ ಕೇಂದ್ರಗಳಲ್ಲಿನ ಚಿಣ್ಣರ ಬಾಲ್ಯವು ನಲುಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.