ADVERTISEMENT

ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಬಾಗೇಪಲ್ಲಿ: ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿಯ ಪ್ರಥಮ, ತೃತೀಯ ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಆಗ್ರಹಿಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹೊರಟ ನೂರಾರು ವಿದ್ಯಾರ್ಥಿಗಳು ಮುಖ್ಯ ಬೀದಿಗಳಲ್ಲಿ ಸಂಚರಿಸಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೇರಿದರು. ಸೆಮಿಸ್ಟರ್ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಿರುವ ವಿಶ್ವವಿದ್ಯಾಲಯ ಕ್ರಮದ ವಿರುದ್ಧ ಧಿಕ್ಕಾರ ಕೂಗಿದರು.

ವಿದ್ಯಾರ್ಥಿ ಮುಖಂಡ ಎ.ಶಂಕರಪ್ರಸಾದ್ ಮಾತನಾಡಿ, ಪ್ರಥಮ ಬಿಎ, ಬಿಕಾಂ, ಬಿಬಿಎಂ ತರಗತಿಗಳಿಗೆ ದಾಖಲಾತಿ ನಡೆದು ಕೇವಲ ಒಂದು ತಿಂಗಳು ಕಳೆದಿದೆ. ಕನ್ನಡ ಹಾಗೂ ಇಂಗ್ಲಿಷ್ ಪಠ್ಯಗಳು ಒಂದೂವರೆ ತಿಂಗಳ ನಂತರ ವಿದ್ಯಾರ್ಥಿಗಳಿಗೆ ಲಭಿಸಿದೆ.

ಹೀಗಾಗಿ ಸೂಕ್ತ ರೀತಿಯಲ್ಲಿ ಅಭ್ಯಾಸ ಮಾಡಲು ಅವಕಾಶ ಸಿಕ್ಕಿಲ್ಲ. ವಿದ್ಯಾರ್ಥಿಗಳ ಸಂಕಷ್ಟ ಪರಿಗಣಿಸದೆ ಏಕಪಕ್ಷೀಯವಾಗಿ ಬೆಂಗಳೂರು ವಿ.ವಿ ತೀರ್ಮಾನ ತೆಗೆದುಕೊಂಡಿದೆ ಎಂದು ದೂರಿದರು.

ಸೆಮಿಸ್ಟರ್ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳ ಮಟ್ಟಿಗೆ ಮುಂದೂಡಿ ಪರಿಕ್ಷಾ ಸಿದ್ಧತೆಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಯನ್ನು ಕುಲಸಚಿವರಿಗೆ ತಹಶೀಲ್ದಾರ್ ಮೂಲಕ ಸಲ್ಲಿಸಿದರು.

ವಿದ್ಯಾರ್ಥಿ ಮುಖಂಡರಾದ ಎ.ರೆಡ್ಡಪ್ಪ, ಎಂ.ಆರ್.ಶ್ರೀನಿವಾಸ್, ಎಚ್.ಎನ್.ಸಂತೋಷ, ಈರಪ್ಪ, ಇ.ಮಧು, ಬಿ.ಎನ್.ನಂದಿನಿ, ಶೈಲಜ ಮತ್ತಿತರರು ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.