ADVERTISEMENT

ಸೇಂಟ್ ಥೆರೆಸಾ ಶಾಲೆಗೆ ಕಲ್ಲೆಸೆತ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಮಂಗಳೂರು: ನಗರದ ಬೆಂದೂರ್‌ವೆಲ್‌ನ ಸೇಂಟ್ ಥೆರೆಸಾ ಶಾಲೆಯ ಸೇಂಟ್ ಥೆರೆಸಾ ಪ್ರತಿಮೆ ಇದ್ದ ಗಾಜಿನ ಪೆಟ್ಟಿಗೆಗೆ ದುಷ್ಕರ್ಮಿಗಳ ತಂಡವೊಂದು ಭಾನುವಾರ ಮುಂಜಾನೆ ಸಿಮೆಂಟಿನ ಇಟ್ಟಿಗೆ ತೂರಿದ್ದು, ಫೈಬರ್ ಗ್ಲಾಸ್ ಪುಡಿಯಾಗಿದೆ. ಆದರೆ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ.

ಭಾನುವಾರ ನಸುಕಿನ 4.30ರ ಸುಮಾರಿಗೆ ನಂಬರ್‌ಪ್ಲೇಟ್ ಇಲ್ಲದ ಮೋಟಾರ್ ಬೈಕ್‌ನಲ್ಲಿ ಬಂದ ಮೂವರ ತಂಡ ಇಟ್ಟಿಗೆ ಎಸೆದು ಪರಾರಿಯಾಗಿದೆ. ದುಷ್ಕರ್ಮಿಗಳ ಗುರುತು ಪತ್ತೆಯಾಗಿಲ್ಲ. ವಾಚ್‌ಮನ್ ಬೆಳಿಗ್ಗೆ ಕಟ್ಟಡದ ಮತ್ತೊಂದು ಪಾರ್ಶ್ವದಲಿದ್ದಾಗ ಕಲ್ಲು ಬಿದ್ದ ಸದ್ದು ಕೇಳಿಸಿದೆ.

ಮುಂಭಾಗಕ್ಕೆ ಬಂದು ನೋಡಿದಾಗ ಪರಾರಿಯಾಗುತ್ತಿದ್ದ ತಂಡ ಕಾಣಿಸಿದೆ. ಸಿಮೆಂಟ್ ಇಟ್ಟಿಗೆಯ ಮೂರು ತುಂಡು ಸ್ಥಳದಲ್ಲಿ ಪತ್ತೆಯಾಗಿದೆ. ಫೈಬರ್ ಗ್ಲಾಸ್‌ಗೆ ಹಾನಿಯಾಗಿದೆ. ಶಾಲೆ ಕಿಟಕಿ ಗಾಜುಗಳೂ ಜಖಂಗೊಂಡಿವೆ.

ಪ್ರತಿಮೆಗೆ ಮಾತ್ರ ಯಾವುದೇ ಹಾನಿಯಾಗಿಲ್ಲ ಎಂದು ಶಾಲೆ ಸಂಚಾಲಕಿ ಸಿಸ್ಟರ್ ರೋಸಲಿನ್ ಸುದ್ದಿಗಾರರಿಗೆ ತಿಳಿಸಿದರು. 2007ರ ಫೆಬ್ರುವರಿ 20ರಂದು ಸಹ ಇದೇ ಪ್ರತಿಮೆ ಹಾಗೂ ಕಿಟಕಿ ಬಾಗಿಲುಗಳಿಗೆ ಕಲ್ಲು ತೂರಲಾಗಿತ್ತು. ನಂತರ ದುರಸ್ತಿ ಮಾಡಿಸಲಾಗಿತ್ತು.

2009ರ ನವೆಂಬರ್ 20ರಂದು ದುಷ್ಕರ್ಮಿಗಳು ಮತ್ತೆ ಕಲ್ಲೆಸೆದಿದ್ದರು. ಠಾಣೆಗೆ ದೂರು ನೀಡಿದ್ದರೂ ಆರೋಪಿಗಳ ಪತ್ತೆ ಆಗಿರಲಿಲ್ಲ. ಬಳಿಕ ಸೇಂಟ್ ಥೆರೆಸಾ ಪ್ರತಿಮೆ ಇದ್ದ ಬಾಕ್ಸ್‌ಗೆ ಫೈಬರ್ ಗ್ಲಾಸ್ ಅಳವಡಿಸಲಾಗಿತ್ತು. ಈಗ ಮೂರನೇ ಬಾರಿಗೆ ದಾಳಿ ನಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಸಂಸ್ಥೆ ಬೆಥನಿ ವಿದ್ಯಾಸಂಸ್ಥೆಯ ಅಧೀನದಲ್ಲಿದ್ದು, ದೇಶಾದ್ಯಂತ 100 ಶಾಖೆಗಳನ್ನು ಹೊಂದಿದೆ.

ಈ ಶಾಲೆ 1997ರಲ್ಲಿ ಆರಂಭವಾಗಿದ್ದು, ಎಲ್ಲಾ ಧರ್ಮ-ವರ್ಗದ ಮಕ್ಕಳೂ ಸೇರಿದಂತೆ 1300 ವಿದ್ಯಾರ್ಥಿಗಳಿದ್ದಾರೆ ಎಂದು ಶಿಕ್ಷಕ ಮತ್ತು ಪೋಷಕರ ಸಂಘಟನೆ ಮಾಜಿ ಅಧ್ಯಕ್ಷೆ ಲಿನೆಟಾ ತಿಳಿಸಿದರು. ಸಂಸ್ಥೆಗೆ ಯಾವುದೇ ಬೆದರಿಕೆ ಕರೆಯೂ ಬಂದಿರಲಿಲ್ಲ. ಇದೊಂದು ಪೂರ್ವನಿಯೋಜಿತ ಕೃತ್ಯ. ಆ ಕಲ್ಲು ಕ್ಯಾಂಪಸ್ ಒಳಗಿನದ್ದು ಅಲ್ಲ. ದುಷ್ಕರ್ಮಿಗಳು ಬರುವಾಗಲೇ ಕಲ್ಲು ತಂದಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದರು.

ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ, ಶಿಕ್ಷಣ ಸಂಸ್ಥೆಯೊಂದಿಗೆ ಉತ್ತಮ ಸಂಬಂಧ ಇದ್ದು, ಸಮಾಜದಲ್ಲಿ ಶಾಂತಿ ಕೆಡಿಸುವ ಉದ್ದೇಶದಿಂದ ಈ ಘಟನೆ ನಡೆದಿದೆ. ಈ ಘಟನೆಯ ಹಿಂದೆ ಕೆಲವೊಂದು ಗುಪ್ತ ಶಕ್ತಿಗಳು ಅಥವಾ ಸಂಘಟನೆಗಳು ಇವೆ. ಕೂಡಲೇ ದಾಳಿ ನಡೆಸಿದ ವ್ಯಕ್ತಿಗಳನ್ನು ಬಂಧಿಸಬೇಕು. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಶಿಕ್ಷಕರ ಮತ್ತು ಪೋಷಕರ ಸಂಘಟನೆಯ ರೋಸ್ ಸಲ್ಡಾನಾ, ವಾಣಿ ಶೆಟ್ಟಿ, ನಾಗೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ಪೊಲೀಸ್ ತನಿಖೆ: ಸೇಂಟ್ ಥೆರೆಸಾ ಶಾಲೆಗೆ ಕಲ್ಲೆಸೆದು ದಾಳಿ ನಡೆಸಿದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸಂಸ್ಥೆಯಲ್ಲಿಯೂ ಕೆಲವರ ನಡುವೆ ಸಣ್ಣ ಬಿಕ್ಕಟ್ಟು ಇದೆ. ಈ ಬಗ್ಗೆಯೂ ಪರಿಶೀಲಿಸಲಾಗುವುದು. ಬೇರೆ ಸಂಘಟನೆಗಳ ಕೃತ್ಯ ಇರಬಹುದಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಮಗ್ರ ತನಿಖೆ ನಡೆಸಿ ಆರೋಪಿಗಳ ಶೀಘ್ರ ಪತ್ತೆ ಹಚ್ಚುತ್ತೇವೆ. ಎಲ್ಲ ಕೋನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ “ಪ್ರಜಾವಾಣಿ~ಗೆ ಭಾನುವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.