ADVERTISEMENT

ಸೇಂಟ್ ಮೇರಿಸ್ ಉತ್ಸವಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಉಡುಪಿ: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಲ್ಲಿ ಪ್ರವಾಸೋದ್ಯಮ ಇಲಾಖೆ, ಖಾಸಗಿ ಸಂಸ್ಥೆ ಜತೆಗೂಡಿ ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ ಫೆ. 3ರಿಂದ 5ರವರೆಗೆ ಆಯೋಜಿಸಿದ್ದ `ಸ್ಪ್ರಿಂಗ್ ಝೂಕ್~ ಐಲ್ಯಾಂಡ್ ಫೆಸ್ಟ್ ವಿದೇಶಿಯರ ಮೋಜು, ವಿವಾದದೊಂದಿಗೆ ಮುಕ್ತಾಯಗೊಂಡಿದೆ.

ಜಿಲ್ಲಾಡಳಿತ ಉತ್ಸವ ಆಯೋಜಿಸಿದ್ದು, `ಪ್ರವಾಸೋದ್ಯಮ ಅಭಿವೃದ್ಧಿಗೆ ಇದೆಲ್ಲ ಅನಿವಾರ್ಯ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಸಮರ್ಥಿಸಿಕೊಂಡಿರುವುದು ಜಿಲ್ಲೆಯ ನಾಗರಿಕರಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಉತ್ಸವ ನೆಪದಲ್ಲಿ ವಿದೇಶಿಯರ ಮೋಜು, ಮಸ್ತಿಗೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ ವಿರುದ್ಧ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸೋಮವಾರ ರಥಬೀದಿಯಲ್ಲಿ ಪ್ರತಿಭಟನೆ ನಡೆಸಿದರು. ಸೀರೆ ಉಟ್ಟಿದ್ದ ಒಂದಿಬ್ಬರು ವಿದೇಶಿ ಮಹಿಳೆಯರೂ ಪ್ರತಿಭಟನೆಯಲ್ಲಿದ್ದು ಗಮನ ಸೆಳೆದರು.

`ಪವಿತ್ರ ಸ್ಥಳವನ್ನು ಸಂಗೀತೋತ್ಸವ ಹೆಸರಿನಲ್ಲಿ ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಇದಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳೂ ಕೈಜೋಡಿಸಿರುವುದು ಬೇಸರ ತಂದಿದೆ. ಗೋಕರ್ಣ, ಹಂಪಿ ವಿದೇಶಿಯರಿಂದ ಹಾಳಾಗಿವೆ. ಈ ಸ್ಥಳವೂ ವಿದೇಶಿಯರಿಂದ ಹಾಳಾಗಬಾರದು. ಸಂಸ್ಕೃತಿ ಹೆಸರಿನಲ್ಲಿ ವಿಕೃತಿ ನಡೆದಿರುವುದು ಅಲ್ಲಿಗೆ ಭೇಟಿ ನೀಡಿದಾಗ ಅರಿವಾಯಿತು ಎಂದು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಾಧ್ಯಮದವರ ಬಳಿ ಸೋಮವಾರ ಬೇಸರ ವ್ಯಕ್ತಪಡಿಸಿದರು.

ಈ ಮಧ್ಯೆ ಸೇಂಟ್ ಮೇರಿಸ್ ವಿದ್ಯಮಾನ ಸಮರ್ಥಿಸಿಕೊಂಡಿರುವ ಜಿಲ್ಲಾಧಿಕಾರಿ ಎ.ಟಿ.ರೇಜು, `ಮಾಧ್ಯಮಗಳು ಅತಿರಂಜಿತ ಸುದ್ದಿ ಬಿತ್ತರಿಸುತ್ತಿವೆ. ಅಲ್ಲಿ ಅಂತಹುದೇನೂ ನಡೆದಿಲ್ಲ. ಹಾಗೇನಾದರೂ ಇದ್ದರೆ ವರದಿ ತರಿಸಿ ಕ್ರಮ ಕೈಗೊಳ್ಳುವೆ~ ಎಂದು ಸೋಮವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

ಪೇಜಾವರ ಶ್ರೀಗಳ ವಿರೋಧ
ಹಾವೇರಿ:
`ಉದ್ಯೋಗ ಸೃಷ್ಟಿಸುವ ಹೆಸರಿನಲ್ಲಿ ಹಿಂದೂ ಸಂಸ್ಕೃತಿಗೆ ಧಕ್ಕೆಯಾಗುವ ಯಾವುದೇ ಉತ್ಸವಗಳನ್ನು ಬೆಂಬಲಿಸುವುದಿಲ್ಲ. ರಾಜ್ಯ ಪ್ರವಾಸೋದ್ಯಮ ಇಲಾಖೆ ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ  ಮೂರು ದಿನ ನಡೆಸಿದ ರೇವ್ ಪಾರ್ಟಿ ಅದಕ್ಕೆ ಹೊರತಾಗಿಲ್ಲ~ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿಯ ಕೃಷ್ಣ ಮಠಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಲ್ಯಾಂಡ್ ಉತ್ಸವದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ್ದೇನೆ. ಅದನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT