ADVERTISEMENT

ಸೌಲಭ್ಯಕ್ಕೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ದಾವಣಗೆರೆ:  ಕಟ್ಟಡ ನಿರ್ಮಾಣ ಹಾಗೂ ಕಲ್ಲು ಒಡೆಯುವ ಕಾರ್ಮಿಕರಿಗೆ ವಿವಿಧ ಸೌಲಭ್ಯ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಿತು.

ಕಳೆದ ಏಪ್ರಿಲ್ 5ರಂದು ಕಾರ್ಮಿಕ ಕಲ್ಯಾಣ ಮಂಡಳಿಯು ಸೌಲಭ್ಯ ಹೆಚ್ಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಸರ್ಕಾರ ಇದುವರೆಗೆ ಆ ಬಗ್ಗೆ ಗಮನಹರಿಸಿಲ್ಲ. ಸರ್ಕಾರದ ಈ ವಿಳಂಬ ನೀತಿಯನ್ನು ಖಂಡಿಸುವುದಾಗಿ ಧರಣಿನಿರತರು ಹೇಳಿದರು.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ~ಸೆಸ್~ ರೂಪದಲ್ಲಿ ಇದುವರೆಗೆ ಒಟ್ಟು ರೂ 1,850 ಮೊತ್ತ ಬಂದಿದೆ. ಆದರೆ, ಈ ಹಣದಲ್ಲಿ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ. ಮಂಡಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನೇ ನೇಮಿಸಿಲ್ಲ ಎಂದು ದೂರಿದರು.

1996ರ ಕಾಯ್ದೆ ಅನ್ವಯ ರಾಷ್ಟ್ರವ್ಯಾಪಿ ಏಕರೂಪದ ಕಾರ್ಮಿಕ ಕಾಯ್ದೆಯನ್ನು ಜಾರಿಗೆ ತಂದು ಕಾರ್ಮಿಕರಿಗೆ ಸೌಲಭ್ಯ ನೀಡಬೇಕು. ಎಲ್ಲ ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕು. ವಲಸೆ ಕಾರ್ಮಿಕರನ್ನೂ ಕಲ್ಯಾಣ ಮಂಡಳಿಯ ಕಾನೂನು ವ್ಯಾಪ್ತಿಗೆ ಒಳಪಡಿಸಬೇಕು. ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ~ಸೆಸ್~ ಕಟ್ಟುವುದನ್ನು ತಪ್ಪಿಸುವವರನ್ನು ಪತ್ತೆಹಚ್ಚಲು ಜಾಗೃತದಳ ರಚಿಸಬೇಕು. ಕಟ್ಟಡ ಕಾರ್ಮಿಕರ ವಸತಿ ಪ್ರದೇಶಗಳನ್ನು ಹೋಬಳಿ, ನಗರ ಮತ್ತು ತಾಲ್ಲೂಕುಮಟ್ಟದಲ್ಲಿ ನಿರ್ಮಿಸಬೇಕು. ಪಿಂಚಣಿಯನ್ನು ರೂ 500ರಿಂದ 3,000ಕ್ಕೆ ಹೆಚ್ಚಿಸಬೇಕು. ಕಾರ್ಮಿಕರ ನಿವೃತ್ತಿ ವಯಸ್ಸನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಹೊಸಳ್ಳಿ ಮಲ್ಲೇಶ್, ಎಚ್.ಜಿ. ಉಮೇಶ್, ಎಚ್.ಎಸ್. ಗಣೇಶ್ ರಾವ್, ರೇವಣಪ್ಪ, ಎನ್. ವೀರಣ್ಣ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.