ADVERTISEMENT

ಹುಬ್ಬಳ್ಳಿ: ಕಿಂಗ್‌ಫಿಷರ್ ಸೇವೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಹುಬ್ಬಳ್ಳಿ: ಆರ್ಥಿಕ ಬಿಕ್ಕಟ್ಟಿನ ಕಾರಣ ನೀಡಿ ಕಿಂಗ್‌ಫಿಷರ್  ಏರ್‌ಲೈನ್ಸ್ ಹುಬ್ಬಳ್ಳಿ-ಬೆಂಗಳೂರು ನಡುವಿನ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಕಿಂಗ್‌ಫಿಷರ್  ಮೂರನೇ ಬಾರಿಗೆ ಹುಬ್ಬಳ್ಳಿ-ಬೆಂಗಳೂರು ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಆದರೆ  ಮುಂಬೈ-ಹುಬ್ಬಳ್ಳಿ ಸೇವೆಯನ್ನು ಮುಂದುವರೆದಿದೆ.

ಬೆಂಗಳೂರು-ಹುಬ್ಬಳ್ಳಿ ನಡುವಿನ ಸೇವೆಯನ್ನು ಕಿಂಗ್‌ಫಿಷರ್  ಪದೇ ಪದೇ ರದ್ದುಗೊಳಿಸುತ್ತಿರುವ ಕಾರಣ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ವಿಮಾನನಿಲ್ದಾಣದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ಈ ಎರಡು ನಗರಗಳ ನಡುವೆ ಪ್ರಯಾಣಿಕರ ದಟ್ಟಣೆ ಇದ್ದರೂ, ಕಿಂಗ್‌ಫಿಷರ್  ಸಂಚಾರ  ಸ್ಥಗಿತಗೊಳಿಸಿದೆ. ಇದಕ್ಕೆ ಸಂಸ್ಥೆ ಆರ್ಥಿಕ ಬಿಕ್ಕಟ್ಟಿನ ಕಾರಣ ನೀಡುತ್ತಿದೆ ಎಂದು ವರದಿಯಲ್ಲಿ ತಿಳಿಸಿರುವುದಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿ ಬಸವರಾಜು `ಪ್ರಜಾವಾಣಿ~ಗೆ ತಿಳಿಸಿದರು.

~ಬೆಂಗಳೂರು-ಹುಬ್ಬಳ್ಳಿ ನಡುವೆ 65 ಆಸನಗಳ ವಿಮಾನ ಸಂಚರಿಸುತ್ತಿದ್ದು, ಎಲ್ಲಾ ಆಸನಗಳು ಭರ್ತಿಯಾಗುವುದರಿಂದ ಮುಂಗಡ ಕಾಯ್ದಿರಿಸಬೇಕಾದ ಪರಿಸ್ಥಿತಿ ಇದೆ. ಹಾಗಿದ್ದರೂ ಸಂಚಾರ ನಿಲ್ಲಿಸುವುದು ಸರಿಯಲ್ಲ. ವಿಮಾನ ನಿಲ್ದಾಣ ಆಧುನೀಕರಣಗೊಂಡಿದ್ದರೂ ವಿಮಾನಗಳು ಬರುತ್ತಿಲ್ಲ. ಕಿಂಗ್‌ಫಿಷರ್‌ಗೆ ನಿರಂತರ ಸೇವೆ ಸಾಧ್ಯವಾಗದಿದ್ದಲ್ಲಿ ಎಎಐ ಬೇರೆ ಸಂಸ್ಥೆಗಳಿಗೆ ಅವಕಾಶ ನೀಡಲಿ ನಾವು ಸಹಕರಿಸುತ್ತೇವೆ~ ಎಂದು ಅವರು ಹೇಳಿದರು.

`ಸಂಚಾರ ಸ್ಥಗಿತದ ಬಗ್ಗೆ ಮೊದಲೇ ಸಂಸ್ಥೆಯು ಮಾಹಿತಿ ನೀಡುವುದರಿಂದ ಪ್ರಯಾಣಿಕರು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ವರದಿ ಆಧರಿಸಿ ಬದಲಿ ವ್ಯವಸ್ಥೆ ಕಲ್ಪಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಎಎಐ ಶಿಫಾರಸು ಮಾಡಬಹುದು~ ಎಂದು ಅವರು ತಿಳಿಸಿದರು.

`ಸೇವೆ ಸ್ಥಗಿತ ಸಂಸ್ಥೆಯ ವಾಣಿಜ್ಯ ವಿಭಾಗದ ನಿರ್ಧಾರವಾಗಿದೆ. ಈ ಕುರಿತು ನಾವೇನು ಮಾತನಾಡುವುದಿಲ್ಲ~ ಎಂದು ಕಿಂಗ್‌ಫಿಷರ್  ವಿಮಾನ ಸೇವೆ ವಿಭಾಗದ ವ್ಯವಸ್ಥಾಪಕ ಲಿವಿನ್ ಫರ್ನಾಂಡಿಸ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.