ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಹುಲಿ ಯೋಜನೆ ಕೈಬಿಡಲು ಯೋಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಡೂರು-ಚಿಕ್ಕಮಗಳೂರು ರೈಲು ಮಾರ್ಗ ಹಾಗೂ ಮಂಗಳೂರು-ಕಾರವಾರ ರೈಲು ಮಾರ್ಗ ಅಭಿವೃದ್ಧಿಯಾಗುತ್ತಿರುವುದು ಬಿಜೆಪಿ ಸಂಸದರ ಹೋರಾಟದ ಫಲ ಎಂದರು.
ದೇಶದಲ್ಲಿ ಹಲವು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್ ಚುನಾವಣೆ ಸಂದರ್ಭದಲ್ಲಿ ಕೇವಲ ಭಾಷಣ ಮತ್ತು ಘೋಷಣೆಗೆ ಸೀಮಿತವಾಗಿ ಮತದಾರರನ್ನು ಕಡೆಗಣಿಸಿವೆ. ರಾಜ್ಯದಲ್ಲಿರುವ 40 ಲಕ್ಷಕ್ಕೂ ಅಧಿಕ ಕೊಳಗೇರಿ ನಿವಾಸಿಗಳಿಗೆ ಸ್ವಂತ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಹೊಸ ಯೋಜನೆ ರೂಪಿಸಲಾಗಿದೆ. ಗೃಹ ಸಚಿವ ಅಶೋಕ್, ಬಿಜೆಪಿ ಅಭಿವೃದ್ಧಿ ಆಧಾರದ ಮೇಲೆ ಮತ ಯಾಚಿಸುತ್ತಿದೆ. ಅಭಿವೃದ್ಧಿ ಕೆಲಸ ಆಗಬೇಕಾದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮೂರು ತಾಲ್ಲೂಕುಗಳಲ್ಲೂ ಅಗ್ನಿಶಾಮಕ ಠಾಣೆ ನೆಲೆಗೊಳಿಸಲಾಗಿದೆ. ಜಿಲ್ಲೆಗೆ ಪ್ರತ್ಯೇಕ ಹಾಲಿನ ಡೇರಿ, ಬಡ್ಡಿರಹಿತ ಸಾಲ, ಪಾಲಿಟೆಕ್ನಿಕ್, ಟಿಸಿಎಚ್ ಕಾಲೇಜು ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು.
ಸಚಿವ ಸುರೇಶ್ ಕುಮಾರ್, ಕಡೂರು ಶಾಸಕ ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಚಿತಾ, ಸದಸ್ಯೆ ಸುಜಾತ, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಪಕ್ಷದ ಮುಖಂಡ ಭಾನುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.