ADVERTISEMENT

ಹೆಣ್ಣು ಭ್ರೂಣಹತ್ಯೆ ತಡೆಗಟ್ಟಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 17:45 IST
Last Updated 2 ಫೆಬ್ರುವರಿ 2011, 17:45 IST

ಬಳ್ಳಾರಿ: ‘ಹೆಣ್ಣು ಹೆತ್ತರೆ ಸಮಸ್ಯೆ’ ಎಂದೇ ಭಾವಿಸಿರುವ ಈ ಕಾಲದಲ್ಲಿ, ಹೆಣ್ಣು ಭ್ರೂಣಹತ್ಯೆ ತಡೆಗಟ್ಟದಿದ್ದರೆ ಬಹುಪತ್ನಿತ್ವ ಪದ್ಧತಿ ಮತ್ತೆ ಜಾರಿಗೆ ಬರುವುದರಲ್ಲಿ ಸಂಶಯವಿಲ್ಲ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಜಿ. ಜಯಲಕ್ಷ್ಮಿ ಕಳವಳ ವ್ಯಕ್ತಪಡಿಸಿದರು.

ಸಂಘಟನೆಯ ವತಿಯಿಂದ ನಗರದ ರಾಘವ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮಹಿಳಾ ದಿನದ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿರುವ ಒಟ್ಟು ಹೆಣ್ಣುಮಕ್ಕಳ ಸಂಖ್ಯೆ ಗಂಡು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇಲ್ಲದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸದ್ಯ ದೇಶದಲ್ಲಿ ಒಟ್ಟು ಸಾವಿರ ಗಂಡು ಮಕ್ಕಳಿಗೆ 927 ಹೆಣ್ಣುಮಕ್ಕಳು ಇದ್ದು,  ಹರಿಯಾಣ, ಪಂಜಾಬ್, ರಾಜಸ್ತಾನ ಹಾಗೂ ಗುಜರಾತ್‌ಗಳಲ್ಲಿ ಈ ಅನುಪಾತ ಇನ್ನೂ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ಎನ್. ಮಂಜುಳಾ, ನೂರು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಉದ್ಯೋಗಸ್ಥ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದು, ಅಂದಿನ ಆ ದಿನವನ್ನೇ ಇಂದು ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಐಎಂಎ ಜಿಲ್ಲಾ ಮಹಿಳಾ ವಿಭಾಗದ ಸಂಘಟನಾ ಅಧ್ಯಕ್ಷೆ ಡಾ.ಕೆ.ಅರುಣಾ ರಾವ್ ಮಾತನಾಡಿದರು, ಸುಗಂಧಿ, ರಾಜಲಕ್ಷ್ಮಿ, ಭುವನೇಶ್ವರಿ, ಡಿ.ನಾಗಲಕ್ಷ್ಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.