ADVERTISEMENT

ಹೊಳಲ್ಕೆರೆ: ರಂಗನಾಥಸ್ವಾಮಿ ಅರಣ್ಯ ಪ್ರದೇಶಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 17:20 IST
Last Updated 15 ಫೆಬ್ರುವರಿ 2011, 17:20 IST
ಹೊಳಲ್ಕೆರೆ: ರಂಗನಾಥಸ್ವಾಮಿ ಅರಣ್ಯ ಪ್ರದೇಶಕ್ಕೆ ಬೆಂಕಿ
ಹೊಳಲ್ಕೆರೆ: ರಂಗನಾಥಸ್ವಾಮಿ ಅರಣ್ಯ ಪ್ರದೇಶಕ್ಕೆ ಬೆಂಕಿ   

ಹೊಳಲ್ಕೆರೆ: ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿ ಸಮೀಪದ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದ್ದು, ಅಪಾರ ಸಸ್ಯ ಮತ್ತು ಪ್ರಾಣಿ ಸಂಪತ್ತು ನಾಶವಾಗಿದೆ.

ಕಳೆದ ಒಂದು ವಾರದಿಂದ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಬೆಟ್ಟದಲ್ಲಿನ ಅಮೂಲ್ಯ ಔಷಧೀಯ ಸಸ್ಯಗಳು, ತೇಗ, ಹೊನ್ನೆ, ಶ್ರೀಗಂಧದಂತಹ ಬೆಲೆಬಾಳುವ ಮರಗಳು, ಅವುಗಳ ಸಸಿಗಳು, ಸರಿಸೃಪಗಳು, ವಿಶಿಷ್ಟ ಪ್ರಾಣಿ, ಪಕ್ಷಿ, ಕೀಟಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.

ಸಮೃದ್ಧ ಸಸ್ಯ ರಾಶಿ: ಹೊಳಲ್ಕೆರೆ-ಹೊಸದುರ್ಗ ರಸ್ತೆಯಲ್ಲಿ ಲೋಕದೊಳಲಿನಿಂದ ಆರಂಭವಾಗುವ ಬೆಟ್ಟಸಾಲು ಹತ್ತಾರು ಕಿ.ಮೀ.ವರೆಗೆ ಹಬ್ಬಿದ್ದು, ಸಮೃದ್ಧ ಸಸ್ಯ ಸಂಪತ್ತನ್ನು ಹೊಂದಿದೆ. ತೇಗ, ಹೊನ್ನೆ, ದೇವದಾರು, ಶ್ರೀಗಂಧದಂತಹ ಬೆಲೆಬಾಳುವ ಮರಗಳು, ಗೇರು, ತುಂಬರೆ, ಕವಳೆ, ಕಬ್ಬಳಿ, ಬೇಲ, ಬಾರೆ, ಬಿಕ್ಕೆ, ನಗರೆ ಮತ್ತಿತರ ವಿಶಿಷ್ಟ ಜಾತಿಗಳ ಹಣ್ಣುಗಳನ್ನು ಕೊಡುವ ಮರಗಳು, ಜಿಂಕೆ, ಕರಡಿ, ಕಾಡುಹಂದಿ, ತೋಳ, ನರಿ, ಮೊಲ, ಕಾಡುಬೆಕ್ಕು ಮುಂತಾದ ಪ್ರಾಣಿ - ಪಕ್ಷಿ ಸಂಕುಲ ಬೆಂದುಹೋಗಿವೆ.

ಪ್ರತಿ ವರ್ಷವೂ ಬೆಂಕಿ: ಬೆಟ್ಟದಲ್ಲಿ ಎತ್ತರವಾಗಿ ಬೆಳೆಯುವ ಬಾಧೆ ಹುಲ್ಲು ಬೇಸಿಗೆಯಲ್ಲಿ ಒಣಗುತ್ತದೆ. ಈ ಹುಲ್ಲಿನಿಂದ ದನ ಕಾಯುವವರು ಬೆಟ್ಟದಲ್ಲಿ ಓಡಾಡಲು ತೊಂದರೆಯಾಗುತ್ತದೆ ಎಂದು ಹುಲ್ಲಿಗೆ ಬೆಂಕಿ ಇಡುವುದು ಸಾಮಾನ್ಯವಾಗಿದೆ. ಇದರಿಂದ ಮಳೆಗಾಲದಲ್ಲಿ ಹೊಸ ಹುಲ್ಲು ಸಮೃದ್ಧವಾಗಿ ಬೆಳೆಯುತ್ತದೆ ಎನ್ನುವುದೂ ಇದಕ್ಕೆ ಕಾರಣ. ಕೆಲವೊಮ್ಮೆ ಕಿಡಿಗೇಡಿಗಳು ಬೇಕೆಂದೇ ಕಾಡಿನಲ್ಲಿ ಬೀಡಿ ಸೇದಿ ಎಸೆಯುವುದರಿಂದಲೂ ಬೆಂಕಿ ತಗುಲುವ ಸಾಧ್ಯತೆಗಳಿವೆ.

ಹಳ್ಳಿಗರ ಬೇಜವಾಬ್ದಾರಿ, ಹುಡುಗಾಟಿಕೆ, ಮೌಢ್ಯತೆಗಳಿಂದ ಪ್ರತಿ ವರ್ಷ ತಗುಲುವ ಬೆಂಕಿಗೆ ಸಸ್ಯಗಳು, ಪ್ರಾಣಿ ಪಕ್ಷಿಗಳು ನಾಶವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.