ADVERTISEMENT

ಹೊಸದಿಬ್ಬದಲ್ಲಿ ವಿಶಿಷ್ಟ ಆಚರಣೆ: ಕ್ಯಾತಪ್ಪನ ಪರಿಷೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST
ಹೊಸದಿಬ್ಬದಲ್ಲಿ ವಿಶಿಷ್ಟ ಆಚರಣೆ: ಕ್ಯಾತಪ್ಪನ ಪರಿಷೆ
ಹೊಸದಿಬ್ಬದಲ್ಲಿ ವಿಶಿಷ್ಟ ಆಚರಣೆ: ಕ್ಯಾತಪ್ಪನ ಪರಿಷೆ   

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಅತ್ಯಂತ ಪ್ರಸಿದ್ಧ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಪುರ‌್ಲೆಹಳ್ಳಿ ಹತ್ತಿರ ಹೊಸದಿಬ್ಬದಲ್ಲಿ ನಡೆಯುವ ಕ್ಯಾತಪ್ಪನ ಪರಿಷೆ ಸೋಮವಾರ ಸಂಭ್ರಮದಿಂದ ಜರುಗಿತು.

ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ಬುಡಕಟ್ಟು ಸಮುದಾಯದವರು ತಲತಲಾಂತರದಿಂದ ನಡೆಸಿಕೊಂಡು ಬಂದಿರುವ ವಿಶಿಷ್ಟ ಆಚರಣೆ, ಸಂಪ್ರದಾಯ ವಿವಿಧ ಜಾತಿಯ ಕಳ್ಳೆಗಳಿಂದ ನಿರ್ಮಿಸಿರುವ 20ರಿಂದ 25 ಅಡಿ ಎತ್ತರದ ಕಳ್ಳೆಗುಡಿಯ ಮೇಲೆ ಪಂಚ ಕಳಶಗಳನ್ನು ಇಟ್ಟು ಅವುಗಳನ್ನು ಕೀಳುವ ಮಹತ್ವದ ಕ್ಷಣ ನೆರೆದ ಜನರ ಮೈನವಿರೇಳುವಂತೆ ಮಾಡಿತು.

ಸಂಪ್ರದಾಯದಂತೆ ಕಳ್ಳೆ ಗುಡಿಯ ಮೇಲಿನ ಕಳಶವನ್ನು ಕೀಳಲು ತಣ್ಣೀರಿನಲ್ಲಿ ಸ್ನಾನ ಮಾಡಿರುವ ಹರಕೆ ಹೊತ್ತ ದೇವರ ಒಕ್ಕಲ ಮಕ್ಕಳಾದ ಈರಗಾರರು ಬರಿಗಾಲು ಮತ್ತು ಬರಿ ಮೈಯಲ್ಲಿ ಕಳ್ಳೆಯ ಮೇಲೆ ಜಿಗಿಯುತ್ತಾ ಕಳಶ ಕೀಳುವ ಸಂದರ್ಭ ರೋಮಾಂಚನಗೊಳಿಸಿತು.

ಈ ಸಂದರ್ಭದಲ್ಲಿ ನೆರೆದಿದ್ದ ಸಹಸ್ರರಾರು ಭಕ್ತರು ಮುಗಿಲು ಮುಟ್ಟುವಂತೆ ಕೇಕೆ ಹಾಕುತ್ತಾ ಕಳ್ಳೆ ಗುಡಿಯ ಮೇಲೆ ಕಳಶ ಕೀಳುವವರನ್ನು ಪ್ರೋತ್ಸಾಹಿಸುತ್ತಿರುವುದು ಕಂಡು ಬಂತು. ಇದರಿಂದ ಮತ್ತಷ್ಟು ಹುರುಪಿನಿಂದ ಕಳ್ಳೆ ಗುಡಿಯ ತುದಿಯ ಮೇಲೆ ನೆಟ್ಟಿರುವ ಕಳಶ ಕೀಳಲು ಈರಗಾರರಿಗೆ ಸಾಧ್ಯವಾಯಿತು. ಬುಡಕಟ್ಟು ಸಾಂಸ್ಕೃತಿಕ ಪರಂಪರೆಗೆ ಹೆಸರಾಗಿರುವ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿ ಕ್ಯಾತಪ್ಪನ ಜಾತ್ರೆಯಲ್ಲಿ ನಡೆಯುವ ವಿಶಿಷ್ಟ ಸಂಪ್ರದಾಯಗಳ ಆಚರಣೆಗಳನ್ನು ವೀಕ್ಷಿಸಲು ಸುತ್ತಲ  ಹಳ್ಳಿಗಳೂ ಸೇರಿದಂತೆ ನೆರೆಯ ಆಂಧ್ರದಿಂದಲೂ ಜನರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.