ADVERTISEMENT

ಹೋರಾಟಗಾರನ ಕೊಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ರಾಮನಗರ: ನೈಸ್ ಕಂಪೆನಿಯ ಬಿಎಂಐಸಿ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಸೋಮಪುರ ನಿವಾಸಿ ಸಿದ್ದಲಿಂಗ ಪ್ರಭು (38) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ದುಷ್ಕರ್ಮಿಗಳು ಸಿದ್ದಲಿಂಗ ಪ್ರಭು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಸಿದ್ದಲಿಂಗಪ್ರಭು ಅವರ ಸಂಬಂಧಿ ಬಸಪ್ಪ ಎಂಬುವವರು ದೂರು ಕೊಟ್ಟಿದ್ದಾರೆ.

`ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿ ಮತ್ತು ಬಿಜೆಪಿ ಮುಖಂಡ ರುದ್ರೇಶ್ ಅವರು ಈ ಕೊಲೆ ಮಾಡಿಸಿರುವ ಸಾಧ್ಯತೆ ಇದೆ~ ಎಂದು ಬಸಪ್ಪ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಖೇಣಿ ಕೈವಾಡ ಆರೋಪ:(ರಾಜರಾಜೇಶ್ವರಿ ನಗರ ವರದಿ): `ನೈಸ್~ ಕಾರಿಡಾರ್ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿದ್ದ ಸಿದ್ದಲಿಂಗ ಪ್ರಭು ಹತ್ಯೆ ಹಿಂದೆ ನೈಸ್ ಕಂಪೆನಿ ಮುಖ್ಯಸ್ಥ ಅಶೋಕ್ ಖೇಣಿ ಅವರ ಕೈವಾಡವಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಸದಸ್ಯರು ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಹಾಗೂ ನೈಸ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ನೈಸ್ ಸಂಸ್ಥೆಯ ಅವ್ಯವಹಾರದ ವಿರುದ್ಧ ಹೋರಾಟ ನಡೆಸುತ್ತಿದ್ದ ಸಿದ್ದಲಿಂಗ ಪ್ರಭು ಅವರಿಗೆ ಸಂಸ್ಥೆಯ ಸಿಬ್ಬಂದಿ ಹಲವು ಬಾರಿ ಬೆದರಿಕೆ ಹಾಕಿದ್ದರು. ಅಲ್ಲದೆ ಅವರ ಕುಟುಂಬ ಸದಸ್ಯರಿಗೆ ಸೇರಿದ ಜಮೀನಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ಮುಂದಾಗಿದ್ದ ಖೇಣಿ ಅವರು, ಸಿದ್ದಲಿಂಗ ಪ್ರಭು ಅವರಿಗೆ ಬೆದರಿಕೆ ಹಾಕಿದ್ದರು ಎಂದು ಪ್ರತಿಭಟನಾಕಾರರು ದೂರಿದರು.

ಖೇಣಿ ಮತ್ತು ಅವರ ಸಂಸ್ಥೆಯ ಸಿಬ್ಬಂದಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾನಿರತರು ಮೈಸೂರು ರಸ್ತೆಯಲ್ಲಿ ಕೆಲ ಕಾಲ ರಸ್ತೆತಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, `ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ರೈತರಿಗೆ ರಕ್ಷಣೆ ಇಲ್ಲದಾಗಿದೆ. ಈ ಹೊಣೆಗೇಡಿ ಸರ್ಕಾರ ತೊಲಗಬೇಕು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಪೊಲೀಸ್ ಅಧಿಕಾರಿಗಳೇ ಜವಾಬ್ದಾರರು~ ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, `ಪ್ರಭು ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ನೈಸ್ ಸಂಸ್ಥೆಯ ಅವ್ಯವಹಾರಗಳ ವಿರುದ್ಧ ಹೋರಾಟ ನಡೆಸುತ್ತಿರುವವರಿಗೆ ಸೂಕ್ತ ರಕ್ಷಣೆ ನೀಡಬೇಕು~ ಎಂದರು.

ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ವಲಯ ಐಜಿಪಿ ಮಾಲಿನಿ ಕೃಷ್ಣಮೂರ್ತಿ, `ಒಂದು ವಾರದೊಳಗೆ ಎಲ್ಲ ಆರೋಪಿಗಳನ್ನೂ ಬಂಧಿಸುತ್ತೇವೆ. ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ಮತ್ತು ರೈತರ ಮೇಲೆ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ~ ಎಂದು ಭರವಸೆ ನೀಡಿದರು. ಆ ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ನೈಸ್ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪಂಚಲಿಂಗಯ್ಯ, ಸಮತಾ ಸೈನಿಕ ದಳ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ರಾಜ್ಯ ವೀರಶೈವ ಕ್ರಿಯಾ ವೇದಿಕೆ ಅಧ್ಯಕ್ಷ ರೇಣುಕಾ ಪ್ರಸಾದ್, ನವ ಕರ್ನಾಟಕ ಯುವ ಶಕ್ತಿ ಅಧ್ಯಕ್ಷ ಕೆ. ಎನ್. ಲಿಂಗೇಗೌಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.