ADVERTISEMENT

ಕಾಡುಹಂದಿಗಳ ಉಪಟಳ; ಬೆಳೆ ನಷ್ಟದ ಭೀತಿ

ನಾಪೋಕ್ಲು ವಿವಿಧೆಡೆ ಬೆಳೆ ನಷ್ಟ; ರೈತರಿಗೆ ಆತಂಕ, ನಿಯಂತ್ರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:41 IST
Last Updated 7 ಜನವರಿ 2019, 13:41 IST
ಯವಕಪಾಡಿ ಗ್ರಾಮದಲ್ಲಿ ಕಾಡುಹಂದಿಗಳ ದಾಳಿಯಿಂದ ಭತ್ತದ ಬೆಳೆ ಹಾನಿಯಾಗಿರುವುದು
ಯವಕಪಾಡಿ ಗ್ರಾಮದಲ್ಲಿ ಕಾಡುಹಂದಿಗಳ ದಾಳಿಯಿಂದ ಭತ್ತದ ಬೆಳೆ ಹಾನಿಯಾಗಿರುವುದು   

ನಾಪೋಕ್ಲು: ಭತ್ತದ ಬೆಳೆ ಕಟಾವಿಗೆ ಬಂದಿರುವ ಹೊತ್ತಿನಲ್ಲಿ ಈ ಭಾಗದ ರೈತರಿಗೆ ಕಾಡುಹಂದಿಗಳ ಉಪಟಳದ ಭೀತಿ ಎದುರಾಗಿದೆ. ಕಾಡುಹಂದಿಗಳ ಹಾವಳಿಯಿಂದ ಭತ್ತದ ಫಸಲು ಹಾಳಾಗುತ್ತಿದ್ದು, ಉಪಟಳ ತಾಳದೆ ಅವಧಿಗೆ ಮುನ್ನವೇ ಭತ್ತ ಕಟಾವು ಮಾಡುತ್ತಿರುವ ನಿದರ್ಶನಗಳು ಇವೆ.

ತಡವಾಗಿ ಬೇಸಾಯ ಆರಂಭಿಸಿದ ರೈತರು ಬೆಳೆ ಸಂಪೂರ್ಣವಾಗಿ ಹಣ್ಣಾಗಲಿ ಎಂದು ಕಟಾವು ವಿಳಂಬ ಮಾಡಲಾಗಿತ್ತು. ಆದರೆ, ಈ ಗದ್ದೆಗಳಿಗೆ ರಾತ್ರಿಯ ಹೊತ್ತು ಕಾಡುಹಂದಿಗಳು ದಾಳಿ ಮಾಡುತ್ತಿವೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಆತಂಕ ಎದುರಾಗಿದೆ.

ಕಾಡುಹಂದಿಗಳ ನಿಯಂತ್ರಣಕ್ಕಾಗಿ ನಾನಾ ನಾನ ಉಪಾಯಗಳನ್ನು ಕಂಡುಕೊಂಡರೂ ಅವುಗಳು ಫಲ ನೀಡುತ್ತಿಲ್ಲ. ಬೇತು ಹಾಗೂ ಆಸುಪಾಸಿನ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಹೆಚ್ಚಿದೆ.

ADVERTISEMENT

ಕಾಡುಹಂದಿಗಳ ಕಾಟದಿಂದ ಕೆಲವು ಬೇಸಾಯ ಕೈಬಿಟ್ಟಿದ್ದರೆ ಮತ್ತೆ ಕೆಲವರು ಕೃಷಿ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ.

ರೈತ ಕೀಕಂಡ ಪೂಣಚ್ಚ ಅವರು, ಬೆಳೆ ಕಟಾವಿಗೆ ಬಂದಿರುವ ಗದ್ದೆಯಲ್ಲಿ ಕಾಡುಹಂದಿಗಳ ಕಾಟ ಹೆಚ್ಚಿದೆ. ಭತ್ತ ಕುಯ್ಲು ಮಾಡಿದಾಗ ಸಿಗುವ ಇಳುವರಿಗೆ ತೃಪ್ತಿ ಪಡಬೇಕಾದ ಸಂದರ್ಭವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಡುಹಂದಿಗಳ ಉಪಟಳದಿಂದಾಗಿ ಗೊಬ್ಬರವನ್ನು ತೋಟಗಳಿಗೆ ಹಾಕಲೂ ರೈತರು ಭಯಪಡುತ್ತಿದ್ದಾರೆ. ಭತ್ತದ ಜೊತೆಗೆ ತೋಟಗಳಿಗೆ ನುಗ್ಗಿ ಕಾಳು ಮೆಣಸಿನ ಬಳ್ಳಿಗಳನ್ನು ಹಾನಿ ಮಾಡುತ್ತಿವೆ ಎಂದು ಬೇತು ಗ್ರಾಮದ ರೈತರು ಅಳಲು ತೋಡಿಕೊಳ್ಳುತ್ತಾರೆ.

‘ಕಾಡುಹಂದಿಗಳ ಉಪಟಳದಿಂದ ಫಸಲೇ ಕೈಗೆಟುಕಲಿಲ್ಲ. ಶ್ರಮಕ್ಕೆ ಪ್ರತಿಫಲ ದೂರದ ಮಾತಾಯಿತು. ಹೀಗಾಗಿ ಭತ್ತದ ಬೇಸಾಯ ಕೈಬಿಡಬೇಕಾಗಿ ಬಂತು' ಎನ್ನುತ್ತಾರೆ ಗ್ರಾಮದ ರೈತ ಪೊನ್ನಣ್ಣ.

‘ಮನೆಗೆ ಆಗುವಷ್ಟು ಕೃಷಿ ಮಾಡಿಕೊಳ್ಳುತ್ತಿದ್ದೇವೆ. ಇಳುವರಿ ಸಿಗುವ ವೇಳೆಗೆ ಕಾಡುಹಂದಿಗಳ ಹಾವಳಿ ಇರುತ್ತದೆ. ಬೆಳೆಯು ಸಿಗುತ್ತಿಲ್ಲ, ಪರಿಹಾರವೂ ಬರುತ್ತಿಲ್ಲ ಎಂದು ಅಭಿಪ್ರಾಯಪಡುತ್ತಾರೆ ಪೂಣಚ್ಚ.

ಗ್ರಾಮದ ಮುಂಜಂಡ್ರ ಸುಬ್ರಮಣಿ, ಬಡಕ್ಕಡ ದೀನಾ ಪೂವಯ್ಯ, ಬಡಕ್ಕಡ ಸುರೇಶ್ ಅವರು ಕಾಡುಹಂದಿಗಳ ಹಾನಿಯಿಂದ ಭತ್ತದ ಫಸಲು ಕಳೆದುಕೊಂಡಿದ್ದಾರೆ. ಸರ್ಕಾರ ನಷ್ಟಕ್ಕೊಳಗಾದ ರೈತರಿಗೆ ಬೆಳೆ ನಷ್ಟ ಪರಿಹಾರನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.