ADVERTISEMENT

₹ 4 ಲಕ್ಷ ವಂಚನೆ: ವರ್ತಕನ ವಿರುದ್ಧ ದೂರು

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಿಂದ ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 16:15 IST
Last Updated 5 ಜುಲೈ 2019, 16:15 IST

ಮೈಸೂರು: ನಕಲಿ ಪತ್ರವೊಂದನ್ನು ಬಿಇಎಂಎಲ್‌ ಸಂಸ್ಥೆಗೆ ನೀಡಿ, ವಾಣಿಜ್ಯ ತೆರಿಗೆ ಇಲಾಖೆಗೆ ₹ 4,11,031 ನಗದನ್ನು ಪಾವತಿಸದೆ ವಂಚಿಸಿದ ವರ್ತಕನ ವಿರುದ್ಧ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಸಿಫ್ ಅಹಮ್ಮದ್‌ ಎಂಬಾತ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿ ನೋಂದಾಯಿತ ವರ್ತಕ. ಇವರು ಮೈಸೂರಿನ ಬಿಇಎಂಎಲ್‌ ಸಂಸ್ಥೆಗೆ ಫ್ಯಾಬ್ರಿಕೇಷನ್‌ ವರ್ಕ್ಸ್‌ ಮಾರಾಟ ಮಾಡುತ್ತಿದ್ದು, 2015ರ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಹಾಗೂ 2016ರ ಜನವರಿ, ಫೆಬ್ರುವರಿ ತಿಂಗಳಿನ ವಹಿವಾಟಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ನಗದನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಕಟ್ಟಿರಲಿಲ್ಲ.

ವಸೂಲಾತಿಗಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಿಇಎಂಎಲ್‌ ಸಂಸ್ಥೆಗೆ, ಈ ವರ್ತಕರಿಗೆ ಸಂಬಂಧಿಸಿದ ಪಾವತಿಯನ್ನು ತಡೆ ಹಿಡಿಯಲು ಮತ್ತು ಅದನ್ನು ಇಲಾಖೆಗೆ ವರ್ಗಾಯಿಸಲು ಕೋರಿ ವಸೂಲಾತಿ ನೋಟಿಸ್‌ ನೀಡಿದ್ದರು. ಹಲ ತಿಂಗಳು ಗತಿಸಿದರೂ; ಬಿಇಎಂಎಲ್‌ ಸಂಸ್ಥೆಯಿಂದ ನಗದು ವಸೂಲಾಗದಿದ್ದುದಕ್ಕೆ ಅನುಮಾನಗೊಂಡ ಅಧಿಕಾರಿಗಳು, ಸಂಸ್ಥೆಗೆ ಭೇಟಿ ನೀಡಿ ವಿಚಾರಿಸಿದ ಸಂದರ್ಭ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ ಹಿಂಪಡೆದಿರುವ ರೀತಿ, ಆಸಿಫ್ ಬಿಇಎಂಎಲ್‌ ಸಂಸ್ಥೆಗೆ ಖೊಟ್ಟಿ ಪತ್ರವೊಂದನ್ನು ನೀಡಿ, ಅಧಿಕಾರಿಯ ಸಹಿಯನ್ನು ಪೋರ್ಜರಿ ಮಾಡಿದ್ದಾರೆ. ನಕಲಿ ಶೀಲನ್ನು ಬಳಸಿದ್ದಾರೆ. ಇದು ಇಲಾಖಾ ಅಧಿಕಾರಿಗಳ ತನಿಖೆಯಲ್ಲಿ ಸಾಬೀತಾಗಿದ್ದರಿಂದ, ಸರ್ಕಾರಕ್ಕೆ ಮೋಸ ಮಾಡಿರುವ ಆಸಿಫ್ ಅಹಮದ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎಂ.ಬಾಲಸುಬ್ರಹ್ಮಣ್ಯ ದೂರು ನೀಡಿದ್ದಾರೆ ಎಂದು ದೇವರಾಜ ಠಾಣೆ ಪೊಲೀಸರು ತಿಳಿಸಿದರು.

ಬೀಗ ಮುರಿದು ಕಳವು

ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ನಾಗನಹಳ್ಳಿ ಗೇಟ್ ಬಳಿಯ ಷಷ್ಟಿ ದೇವಸ್ಥಾನದ ಬಳಿ ನೂತನವಾಗಿ ನಿರ್ಮಿಸಲಾಗುತ್ತಿರುವ ಆರ್ಗ್ಯಾನಿಕ್ ಔಟ್‌ಲೆಟ್, ಹೋಟೆಲ್ ಕಾಮಗಾರಿ ಸ್ಥಳದಲ್ಲಿ ಬೀಗ ಮುರಿದು ಕಳವು ಮಾಡಲಾಗಿದೆ.

ಕಾಮಗಾರಿಗಾಗಿ ತರಿಸಿದ್ದ ಎಲೆಕ್ಟ್ರಿಕಲ್ ಉಪಕರಣಗಳು, ಸ್ಟೀಲ್ ಪೈಪ್ ಹಾಗೂ ಇತರೆ ಪದಾರ್ಥಗಳನ್ನು ಕಳ್ಳರು ಕದ್ದಿದ್ದಾರೆ ಎಂದು ಆರ್ಗ್ಯಾನಿಕ್ ಕಂಪನಿಯ ಕೆಲಸಗಾರ ಶಿವಕುಮಾರ ಸ್ವಾಮಿ ಎಂಬಾತ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಓಎಫ್‌ಸಿ ಕೇಬಲ್‌ಗೆ ಹಾನಿ

ಮೈಸೂರು, ಮಂಡ್ಯ, ಬೆಂಗಳೂರಿಗೆ ಜಿಯೋ ಕಂಪನಿ ಒದಗಿಸುವ ಓಎಫ್‌ಸಿ ಲಿಂಕ್‌ ಸೇವಾ ಸಂಪರ್ಕವನ್ನು ನಗರದ ಎಸ್‌.ಆರ್‌.ರಸ್ತೆಯ ಖಾಸಗಿ ಬಸ್‌ ನಿಲ್ದಾಣದ ಸಮೀಪದಲ್ಲಿ ಅನಿಲ್‌ಕುಮಾರ್, ಗುರು, ಚಂದನ್, ಮಣಿ, ವಿನಯ್ ಮತ್ತು ಕಿರಣ್ ಎಂಬುವವರು ಕಡಿತಗೊಳಿಸಿದ್ದಾರೆ.

ಇದರಿಂದ ಜಿಯೊ ಕಂಪನಿಗೆ ₹ 5.50 ಲಕ್ಷ ನಷ್ಟವುಂಟಾಗಿದ್ದು, ₹ 20,000 ಮೌಲ್ಯದ ಓಎಫ್‌ಸಿ ಕೇಬಲ್‌ಗೂ ಹಾನಿಯಾಗಿದೆ ಎಂದು ಲೋಹಿತ್‌ಗೌಡ ಎಂಬುವವರು ದೂರು ನೀಡಿದ್ದಾರೆ ಎಂದು ಮಂಡಿ ಪೊಲೀಸರು ತಿಳಿಸಿದರು.

ಅತ್ಯಾಚಾರದ ದೂರು: ಯುವಕನ ಬಂಧನ

ಹುಣಸೂರು: ಎಸ್ಸೆಸ್ಸೆಲ್ಸಿ ಓದುತ್ತಿರುವ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬ ದೂರು ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಶುಕ್ರವಾರ ಬಂಧಿಸಲಾಗಿದೆ.

ಹುಣಸೂರಿನ ಅಜಿತ್ (21) ಬಂಧಿತ ಯುವಕ.

ಈತ ಬಾಲಕಿಯನ್ನು ಪುಸಲಾಯಿಸಿ, ತಮಿಳುನಾಡಿನ ಕೊಯಮತ್ತೂರಿಗೆ ಕರೆದೊಯ್ದಿದ್ದ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಯುವಕ–ಬಾಲಕಿಯೊಟ್ಟಿಗಿದ್ದ ಜಾಗ ಪತ್ತೆ ಹಚ್ಚಿ, ಆತನನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತ ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಹುಣಸೂರು ಪೊಲೀಸರು ಮಾಹಿತಿ ನೀಡಿದರು.

ಬೈಕ್‌ನಿಂದ ಬಿದ್ದು ಸಾವು

ತಾಲ್ಲೂಕಿನ ಸಣ್ಣೇಗೌಡರ ಕಾಲೊನಿಯ ರತ್ನಾಪುರಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಹುಣಸೂರು ನಗರದ ಪೌರ ಕಾರ್ಮಿಕ ಕಾಲೊನಿಯ ಪಾರ್ವತಿ ಮೃತ ಮಹಿಳೆ.

ಪಾರ್ವತಿ ಪುತ್ರಿ ಮಾಗಾಳಿ ಎಂಬಾಕೆ ತಾಯಿಯನ್ನು ಬೈಕ್‌ನಲ್ಲಿ ಕರೆದೊಯ್ಯುವಾಗ ಘಟನೆ ನಡೆದಿದೆ ಎಂದು ಹುಣಸೂರು ಗ್ರಾಮಾಂತರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.