ADVERTISEMENT

13 ಗಡಿ ಗ್ರಾಮಗಳ ಕನ್ನಡ ವಿದ್ಯಾರ್ಥಿಗಳು ಅತಂತ್ರ

ರಾಮರಡ್ಡಿ ಅಳವಂಡಿ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ರಾಯಚೂರು: ಜಿಲ್ಲೆಗೆ ಹೊಂದಿಕೊಂಡಂತಿರುವ ಗಡಿನಾಡು ಗ್ರಾಮಗಳಾದ ನೆರೆಯ ಆಂಧ್ರಪ್ರದೇಶದ ಮೆಹಬೂಬನಗರ ಜಿಲ್ಲೆಯ ಮಕ್ತಲ್ ತಾಲ್ಲೂಕಿನ ಮಾಗನೂರು ಮಂಡಲ್ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೃಷ್ಣಾ ಗ್ರಾಮ ಸೇರಿ ಸುತ್ತಮುತ್ತಲಿನ 13 ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈಗ ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿರುವುದು ಬೆಳಕಿಗೆ ಬಂದಿದೆ.

ಇದರಿಂದ ತೀವ್ರ ನೊಂದಿರುವ ಈ ಕನ್ನಡ ಗ್ರಾಮಗಳ ಜನತೆ ಇದೇ 21ರಂದು 13 ಗ್ರಾಮಗಳಲ್ಲಿರುವ ಕನ್ನಡ ಮಾಧ್ಯಮ ಪಾಠ ಶಾಲೆ ಮುಚ್ಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಕನ್ನಡ ಭಾಷೆಯ ಮೇಲಿನ ಪ್ರೀತಿ, ಅಭಿಮಾನದಿಂದ ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿಯವರೆಗೆ ಆಂಧ್ರಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕರ್ನಾಟಕದಲ್ಲಿನ ಸರ್ಕಾರಿ ಕಾಲೇಜು ಹಾಗೂ ವೃತ್ತಿಪರ ಕೋರ್ಸ್ ಪ್ರವೇಶ ನೀಡುತ್ತಿಲ್ಲ!

ಆತಂಕಗೊಂಡ ವಿದ್ಯಾರ್ಥಿಗಳು, ಪಾಲಕರು ಮತ್ತು ಗ್ರಾಮಸ್ಥರು ಮಕ್ಕಳ ಉನ್ನತ ವ್ಯಾಸಂಗದ ಬಗ್ಗೆ ಕಳವಳಗೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ್ದಕ್ಕೆ ಆಂಧ್ರಪ್ರದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶವಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ್ದರೂ ಕರ್ನಾಟಕದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶವಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ್ದಕ್ಕೆ ಸಿಗುತ್ತಿರುವ ಬಹುಮಾನ ಇದೆಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುಮಾರು 40 ಕಿ.ಮೀ. ದೂರದಿಂದ ರಾಯಚೂರಿಗೆ ಉನ್ನತ ವ್ಯಾಸಂಗದ ಕೋರ್ಸ್ ಪ್ರವೇಶಕ್ಕೆ ಆಗಮಿಸಿದರೆ ಕಡ್ಡಿ ತುಂಡು ಮಾಡಿದಂತೆ ಪ್ರವೇಶ ನಿರಾಕರಿಸಲಾಗುತ್ತಿದೆ. ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯರು ಲಿಖಿತವಾಗಿಯೇ ನೀಡಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಡೋನೇಶನ್ ಹಾವಳಿಯಿದೆ. 13 ಗ್ರಾಮದಲ್ಲಿ ಬಡ, ಮಧ್ಯಮ ವರ್ಗ ವಿದ್ಯಾರ್ಥಿಗಳಿರುವುದರಿಂದ ದೊಡ್ಡ ಸಮಸ್ಯೆ ಆಗಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಾರಣ ಏನು: ನೀವು ಗಡಿನಾಡು ಕನ್ನಡಿಗರಲ್ಲ. ಹೊರ ರಾಜ್ಯದವರು. ಗಡಿನಾಡು ಕನ್ನಡಿಗರೆಂದು ರಾಜ್ಯ ಪ್ರಪತ್ರದಲ್ಲಿ(ಗೆಜೆಟ್)ನಲ್ಲಿ ಪುರಾವೆ ಇಲ್ಲ. ಸುತ್ತೋಲೆಯನ್ನೂ ಹೊರಡಿಸಿಲ್ಲ. ಹೀಗಿರುವಾಗಿ ಸರ್ಕಾರಿ- ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಕೊಡಲಾಗದು ಎಂದಿದ್ದಾರೆ. ಇದನ್ನು ವಿರೋಧಿಸಿ 21ರಂದು ಕೃಷ್ಣಾ ಗ್ರಾಮದ ಸುತ್ತಲಿನ 13 ಹಳ್ಳಿಗಳ  ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಕೃಷ್ಣಾ ಗ್ರಾಮದ ಮುನಾಫ್, ಬಿ. ಭೀಮಸಿ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಈ ಗ್ರಾಮಗಳ ಜನರನ್ನು ಗಡಿನಾಡು ಕನ್ನಡಿಗರೆಂದು ರಾಜ್ಯ ಪ್ರಪತ್ರದಲ್ಲಿ ಪ್ರಕಟಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.