ADVERTISEMENT

3.5 ಕೋಟಿ ರೂ. ಸಾಲ ಮರುಪಾವತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:45 IST
Last Updated 15 ಮಾರ್ಚ್ 2011, 19:45 IST

ದಂಡೋತಿ (ಚಿತ್ತಾಪುರ ತಾ.): ಬ್ಯಾಂಕಿನಿಂದ ಪಡೆದ ಕೃಷಿಸಾಲವನ್ನು ಸ್ವಯಂಪ್ರೇರಿತರಾಗಿ ಮರುಪಾವತಿ ಮಾಡಲು ಮಂಗಳವಾರ ಇಲ್ಲಿ ನಡೆಸಿದ ಶಿಬಿರದಲ್ಲಿ ಒಟ್ಟು 3.55 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಭಾರತದ ಬ್ಯಾಂಕಿಂಗ್ ವಲಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಈ ಗ್ರಾಮದ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಕೆ.ಜಿ.ಬಿ) ಶಾಖೆಯು ಈ ಶಿಬಿರವನ್ನು ಪ್ರತಿ ವರ್ಷ ನಡೆಸುತ್ತಿದೆ. ಮಂಗಳವಾರ ನಡೆದ 18ನೇ ವರ್ಷದ ಶಿಬಿರದಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಇವಣಿ, ಬೆಳಗುಂಪ, ಮಾಡಬೂಳ, ಗುಂಡಗುರ್ತಿ, ಭಾಗೋಡಿ, ಮರಗೋಳ ಗ್ರಾಮಗಳ ರೈತರ ಸುಮಾರು 9 ಸಾವಿರಕ್ಕೂ ಖಾತೆಗಳನ್ನು ಬ್ಯಾಂಕಿನ ಈ ಶಾಖೆ ಹೊಂದಿದೆ. ನಿತ್ಯ ಬೆಳಿಗ್ಗೆ 10 ಗಂಟೆಗೆ ಅರಂಭವಾಗುವ ಬ್ಯಾಂಕಿನ ವಹಿವಾಟು, ಮಂಗಳವಾರ ಬೇಗನೇ ಆರಂಭವಾಯಿತು.

ವಿವಿಧ ಗ್ರಾಮಗಳ ನೂರಾರು ರೈತರು ಸಾಲಿನಲ್ಲಿ ನಿಂತು ಸಾಲ ಮರುಪಾವತಿ ಮಾಡಿದರು. ಹೈ-ಕ ಪ್ರದೇಶದ ಪ್ರಮುಖ ಬ್ಯಾಂಕುಗಳಲ್ಲಿ ಕೆ.ಜಿ.ಬಿ. ಕೂಡ ಒಂದು. 1979ರಲ್ಲಿ ಈ ಬ್ಯಾಂಕಿನ ಖಾತೆ ದಂಡೋತಿಯಲ್ಲಿ ಆರಂಭವಾಯಿತು.

 ಆರಂಭದಲ್ಲಿ ಈ ಬ್ಯಾಂಕ್ ರೈತರಿಗೆ ಸಾಲ ಕೊಟ್ಟು, ವಸೂಲು ಮಾಡುತ್ತಿತ್ತು. 1992ರಲ್ಲಿ ರೈತರ ಮನವೊಲಿಸಿ ಮೊದಲ ಬಾರಿಗೆ ‘ಸಾಲ ಮರುಪಾವತಿ ಶಿಬಿರ’ ಆಯೋಜಿಸಿದಾಗ ರೈತರು ಒಟ್ಟು 3.5 ಲಕ್ಷ ರೂಪಾಯಿ ಪಾವತಿ ಮಾಡಿದರು.

ಬ್ಯಾಂಕಿನ ಅಧ್ಯಕ್ಷ ವಿ.ಎಂ.ಹಾಗರಗಿ, ಜನರಲ್ ಮ್ಯಾನೇಜರ್ ಟಿ.ಇ.ನಾಗಪ್ಪ ಹಾಗೂ ಭಕ್ತವತ್ಸಲಂ, ಶಾಖಾ ವ್ಯವಸ್ಥಾಪಕ ಕೆ.ವೈ.ದೇವಿಕೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.