ADVERTISEMENT

ರೈತನಿಗೆ ₹95 ಸಾವಿರ ಪರಿಹಾರ

ವಿದ್ಯುತ್ ಕಿಡಿ ಹಾರಿ ಸುಟ್ಟ ಕಬ್ಬು: ಜಿಲ್ಲಾ ಗ್ರಾಹಕರ ವೇದಿಕೆ ಆದೇಶ

ವೆಂಕಟೇಶ್ ಜಿ.ಎಚ್
Published 4 ಸೆಪ್ಟೆಂಬರ್ 2019, 13:43 IST
Last Updated 4 ಸೆಪ್ಟೆಂಬರ್ 2019, 13:43 IST

ಬಾಗಲಕೋಟೆ: ವಿದ್ಯುತ್ ಲೈನ್‌ನಿಂದ ಕಿಡಿ ಹಾರಿ ಕಬ್ಬಿನ ಬೆಳೆ ಸುಟ್ಟ ಕಾರಣ ಹೊಲದ ಮಾಲೀಕನಿಗೆ ವಾರ್ಷಿಕ ಶೇ 18ರ ಬಡ್ಡಿಯೊಂದಿಗೆ ₹95 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಹೆಸ್ಕಾಂಗೆ ಆದೇಶಿಸಿದೆ.

ಹುಬ್ಬಳ್ಳಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಮತಗಿಯ ಸೆಕ್ಷನ್ ಆಫೀಸರ್ ವಿರುದ್ಧ ಹುನಗುಂದ ತಾಲ್ಲೂಕಿನ ಹಿರೇಮಾಗಿಯ ಶಾರದಾ ಸಾಬಣ್ಣ ಮೇಟಿ ಹಾಗೂ ಗಂಗಾಧರ ಬೈಲಪ್ಪ ಮೇಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷೆ ಕೆ.ಶಾರದಾ ಈ ಆದೇಶ ನೀಡಿದ್ದಾರೆ.

ಪ್ರಕರಣದ ವಿವರ:

ADVERTISEMENT

ಹಿರೇಮಾಗಿಯಲ್ಲಿ ಶಾರದಾ ಹಾಗೂ ಗಂಗಾಧರ ಅವರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದು ಅದರಲ್ಲಿ ಕಬ್ಬು ಬೆಳೆಯಲಾಗಿತ್ತು. 2017ರ ನವೆಂಬರ್ 11ರಂದು ಹೊಲದಲ್ಲಿನ1.10 ಎಕರೆಯಷ್ಟು ಬೆಳೆದು ನಿಂತ ಕಬ್ಬು ಸುಟ್ಟು ಹೋಗಿತ್ತು.

ಹೊಲದದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯಿಂದ ಹಾರಿದ ಕಿಡಿಯಿಂದಾಗಿ ಬೆಳೆ ಸುಟ್ಟಿದೆ. ಸುಮಾರು 30ರಿಂದ 40 ವರ್ಷಗಳಷ್ಟು ಹಿಂದೆ ಅಳವಡಿಸಿರುವ ತಂತಿಗಳು ಹಳೆಯದಾಗಿದ್ದು, ಅವುಗಳನ್ನು ಬದಲಿಸುವಂತೆ ಹಲವು ಬಾರಿ ಲೈನ್‌ಮನ್‌ಗೆ ತಿಳಿಸಿದ್ದರೂ ಅವರು ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ತಂತಿಗಳು ಒಂದಕ್ಕೊಂದು ತಗುಲಿ ಕಿಡಿ ಹಾರಿಬೆಂಕಿ ಹೊತ್ತಿಕೊಂಡಿದೆ. ಇದರಿಂದ ₹2 ಲಕ್ಷ ಬೆಳೆ ಹಾನಿಯಾಗಿದೆ.

ಪರಿಹಾರ ನೀಡುವಂತೆ ಹಲವು ಬಾರಿ ಹೆಸ್ಕಾಂಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹಾಗಾಗಿ ಬೆಳೆಹಾನಿ ಮೊತ್ತದ ಜೊತೆಗೆ ಆಗಿರುವ ಮಾನಸಿಕ ವ್ಯಥೆಗೆ ₹50 ಸಾವಿರ ಹಾಗೂ ದೂರಿನ ಖರ್ಚು ₹5 ಸಾವಿರ ಕೊಡಿಸುವಂತೆ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು. ಕಬ್ಬು ಸುಟ್ಟ ದಿನದಿಂದ ಇಲ್ಲಿಯವರೆಗೆ ಶೇ 18ರಷ್ಟು ಬಡ್ಡಿಯೊಂದಿಗೆ ಪರಿಹಾರ ಮೊತ್ತ ಕೊಡಿಸುವಂತೆ ಕೋರಿದ್ದರು. ತಮ್ಮ ದೂರಿಗೆ ಪೂರಕವಾಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನೀಡಿದ್ದ ವರದಿಯನ್ನು ಸಲ್ಲಿಸಿದ್ದರು.

ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸುಟ್ಟಿದೆ ಎಂಬುದಕ್ಕೆ ಬಲವಾದ ಸಾಕ್ಷ್ಯಾಧಾರಗಳು ಇಲ್ಲ. ದೂರುದಾರರಲ್ಲಿ ಒಬ್ಬರು ವಿದ್ಯುತ್‌ಚ್ಛಕ್ತಿ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಸದರಿ ದೂರುದಾರರನ್ನು ಗ್ರಾಹಕರು ಎಂದು ಪರಿಗಣಿಸಲು ಬರುವುದಿಲ್ಲ ಎಂದು ಹೆಸ್ಕಾಂ ತಕರಾರು ಸಲ್ಲಿಸಿತ್ತು. ಬೆಳಗಾವಿಯ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರಿಂದ ಸ್ಥಳ ಪರಿಶೀಲನೆ ಮಾಡಿಸಿ 1.10 ಎಕರೆ ಮಾತ್ರ ಕಬ್ಬು ಸುಟ್ಟಿದೆ ಎಂಬುದನ್ನು ವೇದಿಕೆಯ ಗಮನಕ್ಕೆ ತಂದಿತ್ತು.

ಎರಡೂ ಕಡೆಯ ವಾದ ಆಲಿಸಿ, ಸಾಕ್ಷ್ಯಗಳನ್ನು ಪರಿಶೀಲಿಸಿದ ಗ್ರಾಹಕರ ವೇದಿಕೆ ದೂರುದಾರರ ವಾದವನ್ನು ಭಾಗಶಃ ಪುರಸ್ಕರಿಸಿ ವಾರ್ಷಿಕ ಶೇ 10ರಷ್ಟು ಬಡ್ಡಿಯೊಂದಿಗೆ ಪರಿಹಾರ ನೀಡಲು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.