ಮೈಸೂರು: ಜಂತುಹುಳು ಔಷಧಿ ಕುಡಿದ 96 ಕುರಿಗಳು ಸಾವಿಗೀಡಾದ ಘಟನೆ ತಾಲ್ಲೂಕಿನ ಇಲವಾಲ ಹೋಬಳಿ ಹುಯಿಲಾಳು ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹೊನಗಾನಹಳ್ಳಿಯ ರಮೇಶ್, ರಾಮಕೃಷ್ಣ, ಪುಟ್ಟಮ್ಮ ಎಂಬುವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಹುಯಿಲಾಳು ಗ್ರಾಮದ ಹೊರ ವಲಯದಲ್ಲಿ ಕುರಿ ಮಾಲೀಕರು ಬೀಡು ಬಿಟ್ಟಿದ್ದರು. ಸುಮಾರು 1,500 ಕುರಿಗಳಿಗೆ ಸೋಮವಾರ ಜಂತುಹುಳು ನಾಶಕ ಔಷಧಿ ನೀಡಲಾಗಿತ್ತು. ಈ ಪೈಕಿ 96 ಕುರಿಗಳು ಅಸ್ವಸ್ಥಗೊಂಡು ಸಾವಿಗೀಡಾದವು.
ವಿಷಯ ತಿಳಿದ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಸಾವಿನ ದವಡೆಯಲ್ಲಿ ಸಿಲುಕಿದ್ದ ಕುರಿಗಳಿಗೆ ಔಷಧಿ ನೀಡಿದರು.
ಸಂಸದ ಅಡಗೂರು ಎಚ್.ವಿಶ್ವನಾಥ್, ಶಾಸಕ ಎಂ.ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕುರಿಗಳ ಸಾವಿನಿಂದ ರೂ 5 ಲಕ್ಷ ನಷ್ಟವಾಗಿದೆ ಎಂದು ಮಾಲೀಕರು ಹೇಳಿದರು.
`ಜಂತುಹುಳು ಔಷಧಿಯನ್ನು ಇಂತಿಷ್ಟು ಪ್ರಮಾಣದಲ್ಲಿ ನೀಡಬೇಕು. ಮೂರು ತಿಂಗಳ ಮರಿಗಳಿಗೆ ಔಷಧಿ ನೀಡುವಂತಿಲ್ಲ. ಆದರೆ ಜಂತುಹುಳು ಔಷಧಿಯನ್ನು ನೀರಿನಲ್ಲಿ ಬೆರೆಸಿ ಸಾಮೂಹಿಕವಾಗಿ ಕುರಿಗಳಿಗೆ ನೀಡಿದ್ದರಿಂದ ಔಷಧಿ ಪ್ರಮಾಣ ಹೆಚ್ಚಾಗಿ ಕುರಿಗಳು ಸಾವನ್ನಪ್ಪಿವೆ~ ಎಂದು ಪಶುವೈದ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.