ADVERTISEMENT

ದೇಶದ್ರೋಹಿಗಳನ್ನು ಬಂಧಿಸದಿದ್ದರೆ 6ರಂದು ‍ಪ್ರತಿಭಟನೆ

‘ಪಾಕಿಸ್ತಾನ್‌ ಜಿಂದಾಬಾದ್‌’ ಬರೆಹ: ಕಮಿಷನರ್‌ ಮೇಲೆ ಮಾಲೀಕಯ್ಯ ಗರಂ, ಶೀಘ್ರ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 11:14 IST
Last Updated 3 ಮಾರ್ಚ್ 2020, 11:14 IST
ಮಾಲೀಕಯ್ಯ ಗುತ್ತೇದಾರ
ಮಾಲೀಕಯ್ಯ ಗುತ್ತೇದಾರ   

ಕಲಬುರ್ಗಿ: ‘ನಗರದಲ್ಲಿ ಈಚೆಗೆ ಮನೆಯ ಗೋಡೆ ಮೇಲೆ ಪಾಕಿಸ್ತಾನ್‌ ಜಿಂದಾಬಾದ್ ಎಂದು ಬರೆದು, ದೇಶದ್ರೋಹ ಎಸಗಿದ ಆರೋಪಿಗಳನ್ನು ಮಾರ್ಚ್‌ 5ರೊಳಗಾಗಿ ಬಂಧಿಸಬೇಕು. ಇಲ್ಲದಿದ್ದರೆ ಮಾರ್ಚ್‌ 6ರಂದು ಬಿಜೆಪಿಯಿಂದ ಬೃಹತ್‌ ಹೋರಾಟ ಎದುರಿಸಬೇಕಾಗುತ್ತದೆ’ ಎಂದು ಪಕ್ಷದ ಮುಖಂಡ ಮಾಲೀಕಯ್ಯ ಗುತ್ತೇದಾರ ಎಚ್ಚರಿಸಿದರು.

‘ನಗರದಲ್ಲಿ ಪೊಲೀಸ್‌ ಆಯುಕ್ತಾಲಯ ಇದ್ದೂ ಇಲ್ಲದಂತಾಗಿದೆ. ದೇಶದ್ರೋಹಿ ಆರೋಪಿಗಳನ್ನು ಇನ್ನೂ ಪತ್ತೆ ಮಾಡಿಲ್ಲ. ಬೇರೆಬೇರೆ ಕಡೆಗಳನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗಳು ನಡೆಯುತ್ತಲೇ ಇವೆ. ಆದರೂ ನಗರದ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಪೊಲೀಸ್‌ ವೈಫಲ್ಯವೇ ದೇಶವಿರೋಧ ಘೋಷಣೆ ಬರೆಯಲು ಕಾರಣ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜಿಲ್ಲೆಯ ವ್ಯಾಪ್ತಿ ದೊಡ್ಡದಾದ ಕಾರಣ ನಗರಕ್ಕೆ ಪ್ರತ್ಯೇಕ ಕಮಿಷನರೇಟ್‌ ನೀಡಿದ್ದಾರೆ. ಆದರೆ, ಇಲ್ಲಿನ ಪೊಲೀಸ್‌ ಆಯುಕ್ತರ ವೈಫಲ್ಯದಿಂದಾಗಿ ಅಪರಾಧಗಳ ಸಂಖ್ಯೆ ಕಡಿಮೆ ಆಗುವ ಬದಲು; ಹೆಚ್ಚಾಗುತ್ತ ಸಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು, ಗೃಹಸಚಿವರ ಬಳಿಯೂ ನಾನು ಚರ್ಚಿಸಿದ್ದೇನೆ. ಕಮಿಷನರ್‌ ಮೇಲೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇನೆ. ಅಸಮರ್ಥ ಅಧಿಕಾರಿಗಳನ್ನು ಕೆಲಸದಿಂದ ತೆಗೆಯಬೇಕು ಎಂದು ಕೋರಿದ್ದೇನೆ. ಬುಧವಾರ (ಮಾರ್ಚ್‌ 4) ಕೂಡ ಬೆಂಗಳೂರಿನಲ್ಲಿ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಗರದಲ್ಲಿ ಅಪರಾಧ ಕೃತ್ಯಗಳ ನಿಯಂತ್ರಣದ ಬಗ್ಗೆ ಚರ್ಚೆ ಮಾಡಲಿದ್ದೇವೆ’ ಎಂದೂ ಅವರು ಹೇಳಿದರು.‌

ADVERTISEMENT

ಬಂದೂಕು ಪರವಾನಗಿ ನಿಲ್ಲಿಸಿ: ‘ನಗರದಲ್ಲಿ ಒಂದೇ ಕೋಮಿಗೆ ಸೇರಿದ 300ಕ್ಕೂ ಹೆಚ್ಚು ಮಂದಿಗೆ ಬಂದೂಕು ಪರವಾನಗಿ ನೀಡಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಈಗಾಗಲೇ ಯಾರಿಗೆ ಪರವಾನಗಿ ನೀಡಿದ್ದಾರೆ ಎಂಬ ಮಾಹಿತಿ ಕೊಡಬೇಕು, ಪರವಾನಗಿ ಹೊಸ ನೀಡುವುದನ್ನು ಸದ್ಯಕ್ಕೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಗೃಹಸಚಿವರಿಗೂ ಮನವರಿಕೆ ಮಾಡುತ್ತೇನೆ. ಈ ವಿಚಾರದಲ್ಲಿ ಆರೋಪ ಎದುರಿಸುತ್ತಿರುವ ಕಮಿಷನರ್‌ ಮೇಲೆ ಶಿಸ್ತು ಕ್ರಮ ಜರುಗಿಸಲು ಮನವಿ ಮಾಡುತ್ತೇನೆ’ ಎಂದರು.

‘ಪೊಲೀಸರನ್ನು ಹೀಗೆ ಹೇಳದೇ ಕೇಳದೇ ಬಿಟ್ಟರೆ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತವೆ. ಇದರಿಂದ ಪಕ್ಷದ ವರ್ಚಸ್ಸಿಗೂ, ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ’ ಎಂದೂ ಅವರು ಎಚ್ಚರಿಸಿದರು.

ಯತ್ನಾಳ್‌ ಹೇಳಿಕೆ ಅರ್ಧ ಸರಿ, ಅರ್ಧ ತಪ್ಪು: ‘ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ನಮಗೆಲ್ಲ ಗೌರವವಿದೆ. ಅವರ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ್‌ ಅವರ ಹೇಳಿಕೆಯಲ್ಲಿ ಎರಡು ಭಾಗಗಳಿವೆ. ಮಾಧ್ಯಮಗಳಲ್ಲಿ ಒಂದು ಭಾಗ ಮಾತ್ರ ಹೆಚ್ಚು ಪ್ರಚಾರವಾದ್ದರಿಂದ ಗೊಂದಲ ಉಂಟಾಗಿದೆ’ ಎಂದು ಮಾಲೀಕಯ್ಯ ಪ್ರತಿಕ್ರಿಯಿಸಿದರು.

‘ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ್‌ ಅವರು ಕೆಲವು ಹಗುರ ಪ‍ದ ಬಳಸಿದ್ದು ಸರಿಯಲ್ಲ. ಅದು ಖಂಡಿತ ತಪ್ಪು. ಆದರೆ, ದೊರೆಸ್ವಾಮಿ ನಮ್ಮ ಪ್ರಧಾನಿ ಹಾಗೂ ರಾಷ್ಟ್ರನಾಯಕರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಬಾರದಿತ್ತು. ಅದರಿಂದ ನಮಗೂ ನೋವಾಗುತ್ತದ ಎಂಬುದನ್ನು ಅವರು ಗಮನಿಸಬೇಕಿತ್ತು. ಮೋದಿ ಅವರ ಬಗ್ಗೆ ದೊರೆಸ್ವಾಮಿ ಕೆಟ್ಟದಾಗಿ ಮಾತನಾಡಿದ್ದಕ್ಕೆ ಯತ್ನಾಳ್‌ ಬೇಸರಗೊಂಡು ಹೇಳಿಕೆ ನೀಡಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ ಇದ್ದರು.

ಸ್ವಾಮೀಜಿಗಳು ಬ್ಲ್ಯಾಕ್‌ಮೇಲ್‌ ಚಟ ಬಿಡಬೇಕು’

‘ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಹತ್ತು ಶಾಸಕರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಅದು ಸರಿಯಾದ ಮಾತಲ್ಲ. ದತ್ತಾತ್ರೇಯ ಕ್ರಿಯಾಶೀಲ ಶಾಸಕ, ಅವರಿಗೆ ಮಂತ್ರಿ ಸ್ಥಾನ ಕೊಡಿ ಎಂದು ಒತ್ತಾಯಿಸಬೇಕೆ ಹೊರತು; ಈ ರೀತಿ ಬ್ಲ್ಯಾಕ್‌ ಮೇಲ್‌ ಮಾಡುವುದನ್ನು ಸ್ವಾಮೀಜಿಗಳು ಬಿಡಬೇಕು’ ಎಂದು ಮಾಲೀಕಯ್ಯ ಆಗ್ರಹಿಸಿದರು.

‘ಸ್ವಾಮೀಜಿ ಹೇಳಿದಂತೆ ಹತ್ತು ಜನರಲ್ಲ; ಒಬ್ಬ ಶಾಸಕನಿಂದ ರಾಜೀನಾಮೆ ಕೊಡಿಸಿದರೂ ನಾನು ರಾಜಕೀಯದಿಂದಲೇ ಹಿಂದೆ ಸರಿಯುತ್ತೇನೆ. ಇವರೆಲ್ಲ ಮಠಕ್ಕೆ ಸೀಮಿತವಾಗಿ ಕೆಲಸ ಮಾಡಬೇಕು. ರಾಜಕೀಯ ಮಾಡುವುದಾದರೆ ಕಾವಿ ತೆಗೆದು ನೇರವಾಗಿ ಧುಮುಕಬೇಕು. ಈ ರೀತಿ ಅಸಂಬಂದ್ಧ ಹೇಳಿಕೆ ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.