ಬಾಗಲಕೋಟೆ: ನಗರದ ಕಿರಾಣಿ ಮಾರುಕಟ್ಟೆಯಲ್ಲಿ ಬುಧವಾರ ರಾತ್ರಿ 6 ಅಂಗಡಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ರೂ.18 ಲಕ್ಷ ಹಾನಿಯಾದ ಘಟನೆ ಸಂಭವಿಸಿದೆ.
ಮಹ್ಮದ್ ಯಾಸೀನ್ ಕೊಲ್ಹಾಪುರ, ಇರ್ಫಾನ್ ಬಾಗೇವಾಡಿ, ರಶೀದ್ ಅತ್ತಾರ, ರಫೀಕ್ ಅತ್ತಾರ, ನಾಗರಾಜ ಬೋನಗೇರಿ, ಕೂಡ್ಲೆಪ್ಪನವರ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಅಂಗಡಿಯಲ್ಲಿದ್ದ ಆಹಾರಧಾನ್ಯ, ಕಿರಾಣಿ ಸಾಮಾನುಗಳು ಮತ್ತು ಪೀಠೋಪಕರಣಗಳು ಸುಟ್ಟುಹೋಗಿವೆ.
ಬುಧವಾರ ರಾತ್ರಿ 10.30ರ ಸುಮಾರಿಗೆ ಮೊದಲು ಒಂದು ಅಂಗಡಿಗೆ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ನಂತರ ಪಕ್ಕದ ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದೆ. ಪಕ್ಕದಲ್ಲಿನ ಜನರು ಮನೆಯಿಂದ ನೀರು ತಂದು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ.
ಜನರ ಆಕ್ರೋಶ
ಬೆಂಕಿ ತಗುಲಿ ಅರ್ಧಗಂಟೆಯಾದರೂ ಅಗ್ನಿಶಾಮಕ ದಳದವರು ಮಾತ್ರ ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಒಂದು ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರೂ ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತೊಂದು ವಾಹನ ಕರೆಯಿಸಲಾಯಿತು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಸುಮಾರು 2 ತಾಸು ಶ್ರಮಿಸಬೇಕಾಯಿತು.
ವರ್ತಕರ ಪ್ರತಿಭಟನೆ
ಕಂದಾಯ ಇಲಾಖೆ, ನಗರಸಭೆಯವರು ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿ, ಪರಿಹಾರ ಹಾಗೂ ರಕ್ಷಣಾ ಕ್ರಮದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ವರ್ತಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗುರುವಾರ ಮುಂಜಾನೆ ಅಂಗಡಿ ತೆರೆಯದೆ ಪ್ರತಿಭಟನೆ ನಡೆಸಿದರು.
ಸಾಂತ್ವನ
ಮಾಜಿ ಸಚಿವ ಎಚ್.ವಾಯ್. ಮೇಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಪಿ.ನಾಡಗೌಡ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಉಪಾಧ್ಯಕ್ಷ ಬಾಳಾಸಾಹೇಬ ಕಲಬುರ್ಗಿ ಅಂಗಡಿಗಳ ಮಾಲೀಕರಿಗೆ ಗುರುವಾರ ಸಾಂತ್ವನ ಹೇಳಿದರು.
ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಅಲ್ಲದೇ ಈ ಕುರಿತು ತನಿಖೆ ನಡೆಸ ಲಾಗುವುದು ಹಾಗೂ ಸರಕಾರದಿಂದ ಸಮರ್ಪಕ ಪರಿಹಾರ ಕೊಡಿಸಲಾಗು ವುದು ಎಂದು ಭರವಸೆ ನೀಡಿದರು.
ಪುನರ್ ನಿರ್ಮಾಣ: ಸೂಚನೆ
ಘಟನಾ ಸ್ಥಳಕ್ಕೆ ಶಾಸಕ ವೀರಣ್ಣ ಚರಂತಿಮಠ ಗುರುವಾರ ಬೆಳೆಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ದುರಂತದಲ್ಲಿ ಹಾನಿಯಾದ ಅಂಗಡಿಗಳನ್ನು ಪುನರ್ ನಿರ್ಮಾಣ ಮಾಡಿಕೊಡಲು ನಗರಸಭೆಯವರಿಗೆ ಸೂಚಿಸಿದರು.
ಹಾನಿಗೊಳಗಾದ ಅಂಗಡಿಗಳ ಮಾಲೀಕರಿಗೆ ಶೀಘ್ರವೇ ನೆರವು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರಿಗೆ ಕೇಳಿಕೊಂಡರು. ಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಶರಣಪ್ಪ ಗುಳೇದ, ತಹಶೀಲ್ದಾರ ನಾಗರಾಜ, ಪೌರಾಯುಕ್ತ ಬಿ.ಎ. ಶಿಂಧೆ, ನಗರಸಭೆ ಸದಸ್ಯರಾದ ಬಸವರಾಜ ಯಮನಾಳ, ಸದಾನಂದ ನಾರಾ, ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.