ADVERTISEMENT

ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ

ಗಮನಸೆಳೆದ ಡೊಳ್ಳು ಕುಣಿತ, ಕರಡಿ ಮಜಲು, ಕೋಲಾಟ: ಜನರಿಗೆ ಪಾನಕ, ಮಜ್ಜಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 5:41 IST
Last Updated 16 ಏಪ್ರಿಲ್ 2018, 5:41 IST
ಜಮಖಂಡಿ ನಗರದ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಡಾ.ಅಂಬೇಡ್ಕರ್‌ ಪ್ರತಿಮೆಗೆ ಸಂಗಮೇಶ ನಿರಾಣಿ ಮಾಲಾರ್ಪಣೆ ಮಾಡಿದರು.
ಜಮಖಂಡಿ ನಗರದ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಡಾ.ಅಂಬೇಡ್ಕರ್‌ ಪ್ರತಿಮೆಗೆ ಸಂಗಮೇಶ ನಿರಾಣಿ ಮಾಲಾರ್ಪಣೆ ಮಾಡಿದರು.   

ಇಳಕಲ್‌: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 127ನೇ ಜಯಂತ್ಯುತ್ಸವ ಅಂಗವಾಗಿ ಶನಿವಾರ ಅಂಬೇಡ್ಕರ್ ಸೇವಾ ಸಮಿತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್‌ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.

ಮಧ್ಯಾಹ್ನ 3 ಗಂಟೆಗೆ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಅಲಂಕೃತ ಸಾರೋಟದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನಗರಸಭೆ ಸದಸ್ಯೆ ಶೋಭಾ ಸಿದ್ದಣ್ಣ ಆಮದಿಹಾಳ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಗಾಂಧಿ ಚೌಕ್‌, ಬಸವಣ್ಣನ ಗುಡಿ, ಬನ್ನಿಕಟ್ಟಿ, ಪೋಲಿಸ್‌ ಮೈದಾನ, ಮಹಾಂತೇಶ ಟಾಕೀಸ್‌, ಕಂಠಿ ಸರ್ಕಲ್‌ ಮಾರ್ಗವಾಗಿ ಸಂಜೆ 7 ಗಂಟೆಗೆ ಅಂಬೇಡ್ಕರ್‌ ಸಮುದಾಯ ಭವನ ತಲುಪಿತು.

ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರು ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನೂರಾರು ಮಹಿಳೆಯರು ಕಳಸದಾರತಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಡೊಳ್ಳು ಕುಣಿತ, ಕರಡಿ ಮಜಲು, ಕೋಲಾಟ, ಜಕ್ಕಲಿಗೆ ಮೇಳ ಜನಪದ ತಂಡಗಳು ಹಾಗೂ ಕ್ರಾಂತಿಗೀತೆಗಳು ಸಾರ್ವಜನಿಕರ ಗಮನ ಸೆಳೆದವು.

ADVERTISEMENT

ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ಸಂಭ್ರಮದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೀರು, ಮಜ್ಜಿಗೆ ಹಾಗೂ ಪಾನಕ ವ್ಯವಸ್ಥೆ ಮಾಡಿದ್ದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ ಅಂಬೇಡ್ಕರ್‍ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಮುಖಂಡರಾದ ಸಿದ್ದಣ್ಣ ಆಮದಿಹಾಳ, ಮಂಜುನಾಥ ಹೊಸಮನಿ, ಮಹಾದೇವ ಕಂಬಾಗಿ, ಗಿರೀಶ ಅಚನೂರ, ಆನಂದ ಚಲವಾದಿ, ಪವಾಡೆಪ್ಪ ಚಲವಾದಿ, ಶ್ಯಾಮ ಮುಧೋಳ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

‘ಡಾ.ಅಂಬೇಡ್ಕರ್‌ ಮನುಕುಲದ ಉದ್ಧಾರಕ’

ಜಮಖಂಡಿ: ‘ಮಹಾಮಾನವತಾವಾದಿ ಎನಿಸಿರುವ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ ಮನುಕುಲದ ಉದ್ಧಾರಕ. ಅವರದು ವಿಶ್ವಮಾನ್ಯ ವ್ಯಕ್ತಿತ್ವ’ ಎಂದು ಬಿಜೆಪಿ ಧುರೀಣ ಸಂಗಮೇಶ ನಿರಾಣಿ ಅಭಿಪ್ರಾಯ ಪಟ್ಟರು.

ನಗರದ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ರವರ 127ನೇ ಜಯಂತ್ಯುತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಅತ್ಯಂತ ಶ್ರೇಷ್ಠ ಸಂವಿಧಾನ ನೀಡುವ ಮೂಲಕ ಡಾ.ಬಿ.ಆರ್‌. ಅಂಬೇಡ್ಕರ್‌ ದೇಶಕ್ಕೆ ದಿಕ್ಕುದೆಸೆ ತೋರಿದ ಮಹಾನ್‌ ವ್ಯಕ್ತಿಯಾಗಿದ್ದಾರೆ. ಅವರು ಸಮಾನತೆಯ ಹರಿಕಾರರು ಎನಿಸಿದ್ದಾರೆ ಎಂದರು.

ಸಂಸ್ಥೆಯ ಚೇರಮನ್‌, ಮಾಜಿ ಶಾಸಕ ಜಯವಂತ ಕಾಳೆ ಮಾತನಾಡಿ, ದಲಿತರನ್ನು ದಾಸ್ಯದಿಂದ ಮುಕ್ತಗೊಳಿಸಿ, ಸ್ವತಂತ್ರ ಭಾರತದ ಪ್ರಜೆಗಳಿಗೆ ಸಮಾನ ಹಕ್ಕು ಮತ್ತು ಕರ್ತವ್ಯ ದಯಪಾಲಿಸಿದ ಕೀರ್ತಿ ಡಾ.ಅಂಬೇಡ್ಕರ್‌ ರವರಿಗೆ ಸಲ್ಲಬೇಕು ಎಂದರು.

ಇದಕ್ಕೂ ಮೊದಲು ಅವರು ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಡಾ.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಯಿತು. ಬಹುಜನ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

‘ದೇಶಕ್ಕೆ ಡಾ.ಅಂಬೇಡ್ಕರ್‌ ಕೊಡುಗೆ ಅಪಾರ'

ಜಮಖಂಡಿ: ‘ಎಲ್ಲ ಜಾತಿ ಜನಾಂಗದವರು, ವಿವಿಧ ಭಾಷಿಕರು ಹಾಗೂ ಬೇರೆ ಬೇರೆ ಧರ್ಮೀಯರು ಎಲ್ಲರೂ ಒಂದೇ ಎಂಬುದು ನಮ್ಮ ಸಂವಿಧಾನದ ತಿರುಳು. ಅಂತಹ ಸಂವಿಧಾನವನ್ನು ದೇಶಕ್ಕೆ ನೀಡಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಕೊಡುಗೆ ಅಪಾರ’ ಎಂದು ಬಿಜೆಪಿ ಧುರೀಣ ಸಂಗಮೇಶ ನಿರಾಣಿ ಹೇಳಿದರು.

ನಗರದ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್‌ ಜಯಂತ್ಯುತ್ಸವದಲ್ಲಿ ಡಾ.ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಮಾಜಿ ಶಾಸಕ ಜಯವಂತ ಕಾಳೆ, ರವಿ ದೊಡ್ಡಮನಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.