ಹುನಗುಂದ: ನಾಲ್ಕು ದಿನಗಳ ಹಿಂದೆ ಬಂದಿದ್ದ ಆಕಸ್ಮಿಕ ಮಳೆ ಸೋಮವಾರವೂ ಬಂದು ಜನರಲ್ಲಿ ಇಲ್ಲದ ಆತಂಕವನ್ನು ತಂದಿತು. ಸಂಜೆ ನಾಲ್ಕಕ್ಕೆ ಬಂದ ಮಳೆ ಭಯಂಕರ ಗುಡುಗು ಮತ್ತು ಸಿಡಿಲಿನಿಂದ ಕೂಡಿತ್ತು. ಧಾರಾಕಾರವಾಗಿ ಸುರಿದ ಆಲಿಕಲ್ಲುಗಳು ರಸ್ತೆ ತುಂಬ ಹರಿದಾಡಿದವು. ಪರಿಣಾಮವಾಗಿ ನಗರದ ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತು.
ಇನ್ನೂ ಬಿಳಿಜೋಳದ ರಾಶಿಯ ದಿನಗಳಲ್ಲಿದ್ದ ರೈತರು ಇಲ್ಲದ ತೊಂದರೆಯನ್ನು ಅನುಭವಿಸಿದರು. ಅಲ್ಪಸ್ವಲ್ಪ ಹಾಕಿದ್ದ ತಮ್ಮ ಕಿತ್ತುಹಾಕಿದ ದಂಟುಗಳಲ್ಲಿನ ತೆನೆಯ ಜೋಳದ ಕಾಳುಗಳು ಮಳೆಯಿಂದಾಗಿ ಕರ್ರಗಾಗುವ ಚಿಂತೆ ಅವರನ್ನು ಬಹುವಾಗಿ ಕಾಡಿತು.
ನಗರದಲ್ಲಿನ ಸಾರ್ವಜನಿಕ ಚರಂಡಿಗಳಲ್ಲಿ ಮಳೆ ನೀರು ತುಂಬಿ ಹರಿದು ಕೆಲವು ಓಣಿ ಮತ್ತು ಬಡಾವಣೆಗಳ ಜನರಿಗೆ ತೊಂದರೆಯನ್ನೂ ಮಳೆ ಮಾಡಿತು. ಅಕಾಲಿಕ ಬಂದ ಮಳೆಯನ್ನು ಜನರು ಶಪಿಸಿದರೆ ರೈತರು ಈಗಲೇ ಮಳೆ ಆರಂಭವಾದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
ಆದರೆ ಭಾರಿ ಪ್ರಮಾಣದಲ್ಲಿ ಬಿದ್ದ ಆಲಿಕಲ್ಲುಗಳು ಮಕ್ಕಳ ಖುಷಿಗೆ ಕಾರಣವಾಗಿದ್ದು ಸತ್ಯ.
ಆಲಿಕಲ್ಲು ತಂದ ಆತಂಕ
ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಕುಂಬಾರಹಳ್ಳ, ನಾಗನೂರು, ಕುಂಚನೂರು, ಚಿಕ್ಕಲಕಿ, ಚಿಕ್ಕಪಡಸಲಗಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಆಲಿಕಲ್ಲು ಮಳೆಯಾಗಿದೆ.
ಬಿರುಸಿನ ಗಾಳಿಯೊಂದಿಗೆ ಗುಡುಗು, ಸಿಡಿಲು ಸಹಿತ ಸುಮಾರು 15ರಿಂದ 20 ನಿಮಿಷ ಅಕಾಲಿಕ ಮಳೆಯಾಗಿರುವುದರಿಂದ ದ್ರಾಕ್ಷಿ, ಜೋಳ, ಗೋಧಿ ಬೆಳೆಗೆ ಹಾನಿಯಾಗಿದ್ದು, ರೈತರು ಮುಂದೇನೊ ಎಂಬ ಆತಂಕದಲ್ಲಿ ಅಲ್ಲಲ್ಲಿ ಮಾತಿಗೆ ತೊಡಗಿದ್ದುದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.