ADVERTISEMENT

ಅಕ್ರಮ ಮದ್ಯ ಮಾರಾಟ: ಕ್ರಮಕ್ಕೆ ಆಗ್ರಹ

ಇಸ್ಪೀಟ್‌, ಮಟ್ಕಾ ದಂಧೆ ನಿಲ್ಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 9:28 IST
Last Updated 18 ಜೂನ್ 2018, 9:28 IST

ಬೀಳಗಿ: ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ, ಇಸ್ಪೀಟ್‌, ಮಟ್ಕಾಗಳ ಹಾವಳಿ ತಡೆಗಟ್ಟಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಅಮಲಝರಿ ಗ್ರಾಮದಲ್ಲಿ ವಿವಿಧ ಮಹಿಳಾ ಸ್ತ್ರೀ ಶಕ್ತಿ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಗ್ರಾಮದ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಅಪಾರ ಸಂಖ್ಯೆಯ ಸ್ತ್ರೀ ಶಕ್ತಿ ಸಂಘಟನೆಯ ಮಹಿಳೆಯರು ಹಾಗೂ ಗ್ರಾಮದ ಮುಖಂಡರು 'ಅಕ್ರಮ ಚಟುವಟಿಕೆಗಳಿಗೆ ಕುಮ್ಮ‌ಕ್ಕು ಕೊಡುವವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ, ಇಸ್ಪೀಟ್‌, ಮಟ್ಕಾ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ. ಇದರಿಂದ ಕೆಲವೊಂದು ಕುಟುಂಬಗಳು ಬೀದಿಪಾಲಾಗಿವೆ. ಹಣ ಕೊಡದೆ ಇದ್ದರೆ, ಕುಡಿದು ಬಂದ ಪತಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಹಲ್ಲೆಗಳನ್ನು ನಡೆಸುತ್ತಿದ್ದಾರೆ. ಯಾವ ವೇಳೆಯಲ್ಲಿ ಅನಾಹುತಗಳು ಸಂಭವಿಸುತ್ತವೆ ಹೇಳಲಿಕ್ಕಾಗದು ಎಂದು ತಮ್ಮ ಅಳಲನ್ನು ತೋಡಿಕೊಂಡರು.

ADVERTISEMENT

ಕುಡಿತದ ಚಟಕ್ಕೆ ಅಂಟಿಕೊಂಡು ಸಂಪೂರ್ಣ ಹಾಳಾಗಿ ಕೆಲವರು ಗ್ರಾಮ ಬಿಟ್ಟು ದುಡಿಯಲಿಕ್ಕೆ ಬೇರೆ ಕಡೆಗೆ ಹೋಗಿದ್ದಾರೆ. ಯುವಕರು ಚಿಕ್ಕಮಕ್ಕಳು ಇಸ್ಪೀಟ್‌ ಆಟಕ್ಕೆ ಅಂಟಿಕೊಳ್ಳುತ್ತಿರುವುದರಿಂದ ಅವರ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಾರದಲ್ಲಿ ಅಕ್ರಮ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕುಳಿತು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಲಕ್ಷ್ಮವ್ವ ಲೋಕಾಪುರ, ಶಾರವ್ವ ಸೊಕನಾದಗಿ, ರಾಮವ್ವ ಕೊಲಕಾರ, ಭಾಗವ್ವ ಹೊಳೆಪ್ಪಗೋಳ, ಗೋವಿಂದಗೌಡ ಪಾಟೀಲ, ಗೌಡಪ್ಪ ಪಾಟೀಲ, ಸಿದ್ದಣ್ಣ ಬಳಗಾನೂರ ಸೇರಿದಂತೆ ಹಲವಾರು ಮುಖಂಡರು ವಿವಿಧ ಸ್ತ್ರೀ ಶಕ್ತಿ ಸಂಘಟನೆಗಳು ಪಾಲ್ಗೊಂಡಿದ್ದರು.

ಪ್ರತಿಭಟನೆಯ ಸ್ಥಳಕ್ಕೆ ಬೀಳಗಿ ಪಿಎಸ್ಐ ಎಸ್‌.ವೈ. ಲೋಹಾರ್ ಭೇಟಿ ನೀಡಿ ಗ್ರಾಮದಲ್ಲಿ ನಡೆಯುತ್ತಿವೆ ಎನ್ನಲಾದ ಸಮಾಜ ಘಾತುಕ ಶಕ್ತಿಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.